ದೇಶ

ಮೃತದೇಹಗಳನ್ನು ಏ.17 ವರೆಗೆ ಸಂರಕ್ಷಿಸಿಡಿ: ಮದ್ರಾಸ್ ಹೈ ಕೋರ್ಟ್

Srinivasamurthy VN

ಚೆನ್ನೈ: ಚಿತ್ತೂರಿನಲ್ಲಿ ನಡೆದ ಎನ್ ಕೌಂಟರ್ ನಿಂದಾಗಿ ಸಾವನ್ನಪ್ಪಿದ ಕೂಲಿ ಕಾರ್ಮಿಕರ ಶವಗಳನ್ನು ಏಪ್ರಿಲ್ 17ರವರೆಗೆ ಸಂರಕ್ಷಿಸಿಡುವಂತೆ ತಮಿಳುನಾಡು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.

ಎನ್ ಕೌಂಟರ್ ನಲ್ಲಿ ಮೃತನಾದ ಕಾರ್ಮಿಕನ ಪತ್ನಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮರುಮರಣೋತ್ತರ ಪರೀಕ್ಷೆ ಸಾಧ್ಯವಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದೆ. ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ 6 ಮಂದಿಯ ಕುಟುಂಬಸ್ಥರು ಮರುಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರಿದ್ದರು. ಆದರೆ ಸಂಬಂಧಿಕರ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ಮರುಮರಣೋತ್ತರ ಪರೀಕ್ಷೆ ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಎಂ.ಸತ್ಯನಾರಾಯಣನ್ ಅವರು, ಮರುಮರಣೋತ್ತರ ಪರೀಕ್ಷೆಗೆ ಅನುಮತಿ ನಿರಾಕರಿಸಿದ್ದು, ಆಂಧ್ರಪ್ರದೇಶ ಹೈಕೋರ್ಟ್ ನಲ್ಲಿ ಈ ವಿಚಾರ ಪ್ರಸ್ತಾಪಿಸುವಂತೆ ಮೃತರ ಕುಟುಂಬಕ್ಕೆ ಸಲಹೆ ನೀಡಿದ್ದಾರೆ. ಅಲ್ಲದೆ ಎನ್ ಕೌಂಟರ್ ನಲ್ಲಿ ಮೃತಪಟ್ಟ ಎಲ್ಲ ಕಾರ್ಮಿಕರ ಮೃತ ದೇಹಗಳನ್ನು ಏಪ್ರಿಲ್ 17 ರವರೆಗೂ ಸಂರಕ್ಷಿಸಿಡುವಂತೆ ತಮಿಳುನಾಡು ಪೊಲೀಸರಿಗೆ ಸೂಚಿಸಿ, ಶವಸಂಸ್ಕಾರಕ್ಕೆ ತಡೆ ನೀಡಿದ್ದಾರೆ.

ಪೊಲೀಸರ ಗುಂಡೇಟಿಗೆ ಬಲಿಯಾದ ತಮ್ಮ ಪತಿಯ ದೇಹದ ಮೇಲೆ ರಾಸಾಯನಿಕ ಪತ್ತೆಯಾಗಿದ್ದು, ಕತ್ತರಿಸಿದ ಗಾಯದ ಗುರುತಿದೆ. ಹೀಗಾಗಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ತಿರುವಣ್ಣಾಮಲೈಯ ಪೋಲೂರ್ ನಿವಾಸಿ ಮುನಿಅಮ್ಮಾಳ್ ಅವರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿತ್ತು. ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್, 6 ಮಂದಿ ಮೃತದೇಹದ ಶವಸಂಸ್ಕಾರಕ್ಕೆ ಒಡ್ಡಿರುವ ತಡೆಯನ್ನು ಏ.17ರವರೆಗೂ ವಿಸ್ತರಿಸಿ ಆದೇಶ ನೀಡಿದೆ.

ಕಳೆದ ಮಂಗಳಾವರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ಅರಣ್ಯಪ್ರದೇಶದಲ್ಲಿ ಸುಮಾರು 150 ಕಾಡುಗಳ್ಳರು ರಕ್ತಚಂದನ ಮರಗಳನ್ನು ಸಾಗಿಸುತ್ತಿರುವ ವಿಚಾರ ತಿಳಿದು ದಾಳಿ ಮಾಡಿದ ಆಂಧ್ರಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ ಪಡೆ 20 ಮಂದಿಯನ್ನು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿದ್ದರು. ಈ ಪ್ರಕರಣ ಆಂಧ್ರ ಪ್ರದೇಶ ಮತು ತಮಿಳುನಾಡು ರಾಜ್ಯಗಳ ಸಂಬಂಧದ ಮೇಲೆ ಗಂಭೀರಪರಿಣಾಮ ಬೀರಿದ್ದು, ಉಭಯ ರಾಜ್ಯಗಳ ಕದನಕ್ಕೆ ಕಾರಣವಾಗಿದೆ.

SCROLL FOR NEXT