ದೇಶ

ಎನ್ಕೌಂಟರ್: ಕೊಲೆ ಪ್ರಕರಣ ದಾಖಲಿಸಿ; ಆಂಧ್ರ ಸರ್ಕಾರಕ್ಕೆ 'ಹೈ' ಆದೇಶ

Srinivasamurthy VN

ಹೈದರಾಬಾದ್: ಚಿತ್ತೂರು ಜಿಲ್ಲೆಯ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ರಕ್ತಚಂದನ ಮರಗಳ್ಳರ ಮೇಲೆ ನಡೆದಿದ್ದ ಎನ್ ಕೌಂಟರ್ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಕಳೆದ ಏಪ್ರಿಲ್ 7ರಂದು ನಡೆದಿದ್ದ ಪೊಲೀಸ್ ಎನ್ ಕೌಂಟರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನೇಕೆ ದಾಖಲಿಸಿಕೊಳ್ಳಬಾರದು ಎಂದು ಹೈದರಾಬಾದಿನಲ್ಲಿರುವ ಹೈಕೋರ್ಟ್ ಆಂಧ್ರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಕರಣ ಸಂಬಂಧ ಆಂಧ್ರಪ್ರದೇಶ ಪೊಲೀಸರು ನ್ಯಾಯಾಲಯಕ್ಕೆ ವಿವರ ಸಲ್ಲಿಸಿದರು.

ಘಟನಾ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಕಳ್ಳರು ದಾಳಿ ಮಾಡಿದಾಗ ಅನಿವಾರ್ಯವಾಗಿ ಪ್ರತಿದಾಳಿ ನಡೆಸಬೇಕಾಯಿತು. ಈ ವೇಳೆ ಕಾರ್ಮಿಕರ ಸಾವು ಸಂಭವಿಸಿದೆ ಎಂದು ನ್ಯಾಯಾಲಯಕ್ಕೆ ಪೊಲೀಸರು ನೀಡಿದ ವರದಿಯಲ್ಲಿ ತಿಳಿಸಲಾಗಿದೆ. ವರದಿಯನ್ನು ಸ್ವೀಕರಿಸಿದ ನ್ಯಾಯಾಲಯ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆಯೇ ಎಂದಾಗ ಪೊಲೀಸರಿಂದ ಇಲ್ಲ ಎಂಬ ಉತ್ತರ ಬಂದಿತು. ಈ ವೇಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಸಂಪೂರ್ಣ ವಿವರಗಳೊಂದಿಗೆ ಮತ್ತೆ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಆದೇಶಿಸಿದೆ ಅಲ್ಲದೆ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

SCROLL FOR NEXT