ಬೆಂಗಳೂರು: ವಿವಿಧ ಬೇಡಿಕೆಗಳನ್ನು ಏಪ್ರಿಲ್ 30ರೊಳಗೆ ಈಡೇರಿಸುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದು (ಶನಿವಾರ) ಸಂಜೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಪೆಟ್ರೋಲ್, ಡೀಸೆಲ್ ಮಾರಾಟಗಾರರು ಹಿಂಪಡೆದಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಕೂಡಾ ರಾಜ್ಯಾದ್ಯಂತ ಶನಿವಾರ ಸಂಜೆ 6 ರಿಂದ ಭಾನುವಾರ ಬೆಳಗ್ಗೆ 6 ರವರೆಗೆ ಪೆಟ್ರೋಲ್ ಬಂಕ್ ಬಂದ್ ಗೆ ಕರೆ ನೀಡಿತ್ತು.
ಸಂಘಟನೆಗಳ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮುಖ್ಯಸ್ಥರು ಸೇರಿದಂತೆ ಪೆಟ್ರೋಲ್, ಡೀಸೆಲ್ ಡೀಲರ್ಸ್ ಗಳ ಮುಖಂಡರ ಜೊತೆ ಮಾತುಕತೆ ನಡೆಸಿ, ಏ.30ರೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಪೆಟ್ರೋಲ್, ಡೀಸೆಲ್ ಮಾರಾಟಗಾರರ ಸಂಘಟನೆ ತಿಳಿಸಿದೆ.