ಶ್ರೀನಗರ: ಕಡೆಗೂ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪಾಕಿಸ್ತಾನ ಬಾವುಟ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತೇಕತಾವಾದಿ ನಾಯಕ ಮಸರತ್ ಆಲಮ್‌ನನ್ನು ಶುಕ್ರವಾರ ಶ್ರೀನಗರದಲ್ಲಿ ಬಂಧಿಸಿದೆ.
ಪಾಕಿಸ್ತಾನ ಬಾವುಟ ಹಾರಿಸಿದ್ದ ಮಸರತ್ ಆಲಮ್ ವಿರುದ್ಧ ಬದ್ಗಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಇಂದು ಪ್ರತೇಕತಾವಾದಿ ನಾಯಕನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಲ್ ಪಟ್ಟಣದಲ್ಲಿ ನಡೆಸಲುದ್ದೇಶಿಸಿರುವ ರ್ಯಾಲಿಯನ್ನು ತಡೆಯಲು ನಿನ್ನೆಯಷ್ಟೇ ಮಸರತ್ ಆಲಮ್ ಮತ್ತು ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಸೈಯದ್ ಅಲಿ ಶಾ ಗಿಲಾನಿ ಇಬ್ಬರಿಗೂ ಗೃಹಬಂಧನ ವಿಧಿಸಲಾಗಿತ್ತು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಗಿಲಾನಿಯ ಹೈದರ್ ಪೋರ ಮನೆಯ ಸುತ್ತ ಕಣ್ಗಾವಲನ್ನೂ ಇಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭಯೋತ್ಪಾದಕ ನಿಗ್ರಹ ದಳ ನಡೆಸಿದ ದಾಳಿಯಲ್ಲಿ ದಕ್ಷಿಣ ಕಾಶ್ಮೀರದ ಇಬ್ಬರು ಯುವಕರು ಹತ್ಯೆಗೀಡಾದ ಹಿನ್ನೆಲೆಯಲ್ಲಿ ಗಿಲಾನಿ ಟ್ರಾಲ್ ಪಟ್ಟಣದಲ್ಲಿ ಶುಕ್ರವಾರ ರ್ಯಾಲಿ ನಡೆಸುವ ಸಿದ್ಥತೆ ನಡೆಸಿದ್ದರು. ಇನ್ನೊಂದೆಡೆ ಪ್ರತ್ಯೇಕತಾವಾದಿ ಮಸರತ್ ನಿನ್ನೆ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನ ಬಾವುಟ ಹಾರಾಟ ಮಾಡಿದ್ದಲ್ಲದೆ ದೇಶವಿರೋಧಿ ಘೋಷಣೆಗಳನ್ನೂ ಕೂಗಿದ್ದರು.
ಪಾಕಿಸ್ತಾನ ಬಾವುಟ ಪ್ರದರ್ಶನಕ್ಕೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ತೀವ್ರ ಟೀಕೆ ವ್ಯಕ್ತ ವಾಗಿತ್ತು. ಕೇಂದ್ರ ಗಹ ಸಚಿವಾಲಯ ಕೂಡ ಪ್ರತ್ಯೇಕವಾದಿಗಳ ಇಂಥ ದುರ್ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಸರ್ಕಾರಕ್ಕೆ ಸೂಚಿಸಿತ್ತು.
ಪಾಕ್ ಬೆಂಬಲ: ಕಾಶ್ಮೀರದ ಬೀದಿಗಳಲ್ಲಿ ಪಾಕ್ ಧ್ವಜ ಹಾರಿಸಿದ್ದಕ್ಕೆ ಪಾಕಿಸ್ತಾನ ಬೆಂಬಲ ವ್ಯಕ್ತಪಡಿಸಿದೆ. ಈ ರೀತಿ ಮಾಡಿದ್ದರಲ್ಲಿ ತಪ್ಪೇನಿಲ್ಲ. ಇದು ಕಾಶ್ಮೀರಿಗಳು ನಮ್ಮ ಜತೆಗೆ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ತೋರಿಸುತ್ತದೆ ಎಂದು ಪಾಕ್‍ನ ವಿದೇಶಾಂಗ ಇಲಾಖೆ ವಕ್ತಾರ ತಸ್ಮಿನ್ ಅಸ್ಲಾಂ ಹೇಳಿದ್ದಾರೆ. ಪ್ರತ್ಯೇಕವಾದಿಗಳ ವಿರುದ್ಧ ವಕೀಲರು ಶುಕ್ರವಾರ ಜಮ್ಮು ಬಂದ್‍ಗೆ ಘೋಷಿಸಿದ್ದಾರೆ.