ಚಂಡೀಗಢ: ವಿಚಾರಣಾಧೀನ ಕೈದಿಯ ಕೋರಿಕೆಯ ಮೇರೆಗೆ ಪಂಜಾಬಿನ ತರಣ್ ತಾರಣ್ ಜೈಲಿನಲ್ಲಿ ಕಳೆದ ಗುರುವಾರ ಜೈಲಿನಲ್ಲಿ ನಡೆದ ಮಹಿಳೆಯರ ಮನರಂಜನಾ ಕಾರ್ಯಕ್ರಮ ಭಾರೀ ವಿವಾದ ಸೃಷ್ಟಿಸಿದೆ.
ಬೈಶಾಖೀಯ ದಿನದ ಅಂಗವಾಗಿ ಜೈಲಿನಲ್ಲಿ ಮನರಂಜನಾ ಸಂಕೀರ್ಣದಲ್ಲಿ ಆಯೋಜಿಸಿದ್ದು, ಸುಮಾರು 45 ನಿಮಿಷಗಳ ವನಿತೆಯರು ಸಾಂಪ್ರದಾಯಿಕ ನೃತ್ಯ ಮಾಡಿದ್ದರು. ಸಾಂಪ್ರದಾಯಿಕವಾದರೂ ಅತ್ಯಾಕರ್ಷಕ ನೃತ್ಯ ಉಡುಗೆಗಳಲ್ಲಿ ನೃತ್ಯ ಪ್ರದರ್ಶಿಸಿದ ಮಹಿಳೆಯರ ಮೈಮಾಟವನ್ನು ಆಸ್ವಾದಿಸಿದ ಕೈದಿಗಳು ನಶೆ ಏರಿದವರಂತೆ ಸಂಗೀತಕ್ಕೆ ಹೆಜ್ಜೆ ಹಾಕಿ ನರ್ತಿಸಿರುವುದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ.
2013ರಲ್ಲಿ ಯುವ ಕಾಂಗ್ರೆಸ್ ನಾಯಕ ಸುಖರಾಜ್ ಸಿಂಗ್‌ನ ಕೊಲೆಯ ಪ್ರಮುಖ ಆರೋಪಿ ಶ್ರವಣ್ ಸಿಂಗ್ ತರಣ್ ತಾರಣ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದು, ಶ್ರವಣ್ ಸಿಂಗ್ ಗುರುದಾಸ್‌ಪುರ ಜಿಲ್ಲೆಯ ಫತೇಗಢ ಶೂರಿಯಾನ್ ಗ್ರಾಮದ ವನಿತಾ ನೃತ್ಯ ತಂಡವನ್ನು 16 ಸಾವಿರ ರು. ಸಂಭಾವನೆಗೆ ಗೊತ್ತುಪಡಿಸಿದ್ದ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಮನರಂಜನಾ ಕಾರ್ಯಕ್ರಮಕ್ಕೆ ಮೇಲಧಿಕಾರಿಗಳಿಂದ ಯಾವುದೇ ಅಧಿಕೃತ ಅನುಮತಿಯನ್ನು ಪಡೆದಿಲ್ಲ, ಮಹಿಳೆಯರಿಗೆ ಪ್ರವೇಶಾವಕಾಶವೇ ಇಲ್ಲದಿರುವ ತರಣ್ ತಾರಣ್‌ನ ಪತ್ತಿ ಜೈಲಿಗೆ ಮಹಿಳಾ ನೃತ್ಯ ತಂಡವನ್ನು ಕರೆಸಿಕೊಂಡು ಕೈದಿಗಳಿಗೆ ಮನರಂಜನೆಯನ್ನು ಏರ್ಪಡಿಸುವುದಕ್ಕೆ ಡೆಪ್ಯುಟಿ ಜೈಲ್ ಸುಪರಿಂಟೆಂಡೆಂಟ್ ದೇವೀಂದರ್ ಸಿಂಗ್ ಕಾರಣಕರ್ತರಾಗಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮೃತಸರ ಜೈಲ್ ಸುಪರಿಂಟೆಂಡೆಂಟ್ ಆರ್ ಕೆ ಶರ್ಮಾ ಅವರು ಪಂಜಾಬ್ ಪೊಲೀಸ್ ಜೈಲು ಮುಖ್ಯಸ್ಥ ಎಡಿಜಿಪಿ ಆರ್ ಕೆ ಮೀಣ ಅವರಿಗೆ ವರದಿ ನೀಡಿದ್ದಾರೆ.