ನವದೆಹಲಿ: ಆಪ್ ರ್ಯಾಲಿಯಲ್ಲಿ ರಾಜಸ್ತಾನ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆಗೆ ಪ್ರಚೋದನೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆ ವಿರೋಧಿಸಿ ಆಮ್ ಆದ್ಮಿ ಪಕ್ಷ ನಡೆಸುತ್ತಿದ್ದ ರ್ಯಾಲಿಯಲ್ಲಿ ಮರವೇರಿ ಕುಳಿತುಕೊಳ್ಳಲು ಗಜೇಂದ್ರ ಸಿಂಗ್ ಗೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಕೆಲವರು ಪುಸಲಾಯಿಸಿದ್ದರು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಗಜೇಂದ್ರ ಸಿಂಗ್ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಭಾಗವಹಿಸಿದ್ದ ಪ್ರತ್ಯಕ್ಷದರ್ಶಿಯನ್ನು ವಿಚಾರಣೆಗೊಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದೆ.
ಇನ್ನೂ ವಿಚಾರಣೆ ತೀವ್ರಗೊಳಿಸಿರುವ ದೆಹಲಿ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಜೊತೆಗೆ ಖಾಸಗಿ ವಾಹಿನಿಯ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಲು ರಾಜಸ್ತಾನದಿಂದ ದೆಹಲಿಗೆ ಬಂದಿದ್ದ ಗಜೇಂದ್ರಸಿಂಗ್ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗೆ ತನ್ನ ಸಮಸ್ಯೆಗಳನ್ನು ತಿಳಿಸಲು ಬಂದಿದ್ದ ಎಂದು ಗಜೇಂದ್ರ ಸಿಂಗ್ ಕುಟುಂಬಸ್ಥರು ಹೇಳಿದ್ದಾರೆ.