ನವದೆಹಲಿ: ಭಾರತೀಯ ಜನತಾ ಪಕ್ಷ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, 10 ಕೋಟಿ ಸದಸ್ಯರನ್ನು ಹೊಂದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವೆಂದು ಘೋಷಿಸಲು ನನಗೆ ಅತೀವ ಹೆಮ್ಮೆ ಇದೆ ಎಂದು ಹೇಳಿದರು.
"ಬಿಜೆಪಿ ಪಕ್ಷ ಸದಸ್ಯರ ಸಂಖ್ಯೆ 10 ಕೋಟಿ ದಾಟಿದ್ದು, ಇದೀಗ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಖ್ಯಾತಿ ನಮ್ಮ ಪಕ್ಷಕ್ಕೆ ದಕ್ಕಿದೆ. 8.6 ಕೋಟಿ ಸದಸ್ಯ ಬಲವನ್ನು ಹೊಂದಿರುವ ಕಮ್ಯೂನಿಸ್ಟ್ ಪಾರ್ಟಿ ಆಪ್ ಚೀನಾ 2ನೇ ಸ್ಥಾನದಲ್ಲಿದೆ. ಆಂತರಿಕ ಪ್ರಜಾಪ್ರಭುತ್ವ ಮತ್ತು ಸಾಂಸ್ಥಿಕ ಚುನಾವಣೆಯನ್ನು ಹೊಂದಿರುವ ಏಕೈಕ ಪಕ್ಷ ನಮ್ಮದಾಗಿದ್ದು, ಕಳೆದ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಬಹು ಮಹತ್ವಾಕಾಂಕ್ಷೆಯ ಆನ್ ಲೈನ್ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಹುರುಪು ನೀಡಿದರು. ನಮ್ಮ ಪಕ್ಷವು ಹೈಟೆಕ್ ತಂತ್ರಜ್ಞಾನ ವ್ಯವಸ್ಥಯನ್ನು ಅಳವಡಿಸಿದ್ದು, ದೇಶದ ಯಾವುದೇ ಮೂಲೆಯಿಂದಾದರೂ ಸರಿ ಯಾರಾದರೂ ಬಿಜೆಪಿ ಸದಸ್ಯರಾಗಬಹುದು ಎಂದು ಹೇಳಿದರು.
ಇದೇ ವೇಳೆ ಇತ್ತೀಚೆಗೆ ಮುಕ್ತಾಯಗೊಂಡ ಪಶ್ಮಿಮ ಬಂಗಾಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತಂತೆ ಮಾತನಾಡಿ ಶಾ, ರಾಜ್ಯ ಸರ್ಕಾರ ಪೊಲೀಸರನ್ನು ಸರಿಯಾಗಿ ವಿಂಗಡಣೆ ಮಾಡಿದ್ದರೆ ನಿಜಕ್ಕೂ ಆ ಚುನಾವಣಾ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ತೋಳ್ಬಲ ಮತ್ತು ಅಧಿಕಾರದ ಬಲದಿಂದ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಮುಂಬರುವ ಚುನಾವಣೆಗಳ ವೀಕ್ಷಣೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಪಶ್ಮಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್ ಪಕ್ಷ 91 ಕ್ಷೇತ್ರಗಳ ಪೈಕಿ 70ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು.