ಜೋಧ್ ಪುರ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಸಂಬಂಧ ಜೈಲಿನಲ್ಲಿರುವ ಆರೋಪಿ ಆಸಾರಾಂ ಬಾಪು ಮಹಾನ್ ಸಂತ. ಹೀಗೆಂದು ರಾಜಸ್ಥಾನದ ಶಾಲೆಗಳಲ್ಲಿ ಓದುತ್ತಿರುವ ಪುಟ್ಟ ಪುಟ್ಟ ಮಕ್ಕಳಿಗೆ ಬೋಧಿಸಲಾಗುತ್ತಿದೆ.
ರಾಜಸ್ತಾನದ ಮೂರನೇ ತರಗತಿ ಪಠ್ಯಪುಸ್ತಕ ನಯಾ ಉಜಾಲಾ(ಹೊಸ ಬೆಳಕು)ದ 40ನೇ ಪುಟದಲ್ಲಿ ಈ ಆವಾಂತರ ಕಂಡುಬಂದಿದ್ದು ಅಸಾರಾಂ ಬಾಪು ದೇಶದ ಶ್ರೇಷ್ಠ ಸನ್ಯಾಸಿಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಗುರುನಾಕ್, ಮದರ್ ಥೆರೇಸಾ, ರಾಮಕೃಷ್ಣ ಪರಮಹಂಸ ಮತ್ತು ವಿವೇಕನಂದರಂತಹ ಮಹಾತ್ಮರ ಹೆಸರಿನ ಜತೆಗೆ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಹೆಸರು ಕೂಡ ಇದೆ.
ರಾಜಸ್ತಾನದ ಸುಮಾರು 80 ಶಾಲೆಗಳಲ್ಲಿ ಈ ಪಠ್ಯಪುಸ್ತಕಗಳನ್ನು ಬೋಧಿಸಲಾಗುತ್ತಿದೆ. ಆದರೆ ಜೋಧಪುರದ ಶಿಕ್ಷಣ ಇಲಾಖೆ ಈ ಕುರಿತು ತಮಗೆ ಅರಿವೇ ಇಲ್ಲ ಎಂದು ಬೇಜವಬ್ದಾರಿತನ ಪ್ರದರ್ಶಿಸಿದೆ. ಆಸಾರಾಂ ಬಾಪು ಅವರು ಗುಜರಾತ್‌ನಲ್ಲಿ ಆಶ್ರಮ ಹೊಂದಿದ್ದು, ದೇಶಾದ್ಯಂತ ಅಪಾರ ಭಕ್ತಗಣವನ್ನು ಹೊಂದಿದ್ದಾರೆ. ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಅವರು ಜೋಧಪುರ್ ಜೈಲಿನಲ್ಲಿದ್ದಾರೆ.