ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ನಡೆಸಲು 9 ಜನ ಉಗ್ರರು ರಾಷ್ಟ್ರರಾಜಧಾನಿ ನವದೆಹಲಿಗೆ ನುಸುಳಿದ್ದಾರೆ ಎಂದು ಮಾಹಿತಿ ನೀಡಿರುವ ಗುಪ್ತಚರ ಇಲಾಖೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ದಾಳಿ ನಡೆಸಲು ಉದ್ದೇಶಿಸಿರುವ ಉಗ್ರರು ಅಪಾರ ಪ್ರಮಾಣದ ಸ್ಫೋಟಕಗಳನ್ನು ಹಾಗೂ ಆರ್ ಡಿ ಎಕ್ಸ್ ಗಳನ್ನು ಸಂಗ್ರಹಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯದಿನಾಚರಣೆಯಂದು ಅವಗಢಗಳು ಸಂಭವಿಸದಂತೆ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ಭದ್ರತಾ ಇಲಾಖೆಗಳಿಗೂ ಆದೇಶ ನೀಡಿದೆ.
ಭಾರತಕ್ಕೆ ನುಗ್ಗಿರುವ ಭಯೋತ್ಪಾದಕರು ಪಾಕಿಸ್ತಾನದಿಂದ ಪ್ರವೇಶಿಸಿದ್ದಾರೆ ಎಂದು ಶಂಕಿಸಲಾಗಿದ್ದು, ಮೂರು ತಿಂಗಳ ಹಿಂದೆಯೇ ದಾಳಿಗೆ ಯೋಜನೆ ರೂಪಿಸಲಾಗಿದೆ, ದಾಳಿಗೆ ಅಗತ್ಯವಿರುವ ಸ್ಫೋಟಕಗಳನ್ನು ಮೂರು ತಿಂಗಳ ಹಿಂದೆಯೇ ನವದೆಹಲಿಗೆ ಸಾಗಿಸಲಾಗಿದೆ ಎಂದು ಐಬಿ ತಿಳಿಸಿದೆ.