ನವದೆಹಲಿ: ಮೋದಿ ಅವರ ಹೇಳಿಕೆ ವಿರುದ್ಧ ಕಿಡಿಕಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಜಂಗಲ್ ರಾಜ್ 2 ರ ಬಗ್ಗೆ ಜನರಲ್ಲಿ ಭಯ ಹುಟ್ಟುಹಾಕುತ್ತಿರುವವರು ಇದೀಗ ಮಂಡಲರಾಜ 2 ಆಗಿರುವ ಅವರೇ ತಮ್ಮ ಮುಂದಿನ ಪಥನದ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ ಇಂದು ಬಿಹಾರಕ್ಕೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶದಲ್ಲಿ ಮಾತನಾಡಿದ್ದರು. ಈ ವೇಳೆ ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಹಾಗೂ ಬಿಹಾರ ಮುಖ್ಯಮಂತ್ರಿ ಅವರ ಕಾಲೆಳೆದಿದ್ದ ಅವರು, ಆರ್‌ಜೆಡಿ ಎಂದರೆ ಜಂಗಲ್ ರಾಜ್ ಕಾ ಡರ್ (ಜಂಗಲ್ ರಾಜ್‌ನ ಆತಂಕ), ಜೆಡಿಎಯು ಎಂದರೆ ಜನತಾ ಕಾ ದಮನ್-ಉತ್ಪಿದನ್ (ಜನರ ಆಶೋತ್ತರಗಳ ದಮನ) ಎಂದು ವ್ಯಂಗ್ಯವಾಡಿದ್ದರು.
ಇದೀಗ ಮೋದಿ ಅವರ ಹೇಳಿಕೆ ಕುರಿತಂತೆ ಟ್ವಿಟರ್ ಮೂಲಕ ಕಿಡಿಕಾರಿರುವ ಲಾಲು ಪ್ರಸಾದ್ ಯಾದವ್ ಅವರು, ಬಿಹಾರ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದರೆ ಅತ್ತ ನರೇಂದ್ರ ಮೋದಿ ಅವರಿಗೆ ಆತಂಕ ಪ್ರಾರಂಭವಾಗಿದೆ. ಹೀಗಾಗಿಯೇ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಮಾವೇಶನದಲ್ಲಿ ಓರ್ವ ಪ್ರಧಾನಿಯಾಗಿ ಮೋದಿ ಅವರು ಮಾತನಾಡಿದ ರೀತಿ ಅವರ ಸ್ಥಾನಮಾನಕ್ಕಿರುವ ಬೆಲೆಯನ್ನು ಕಡಿಮೆ ಮಾಡಲಿದೆ. ಜಂಗಲ್ ರಾಜನನ್ನು ಗೆಲ್ಲಿಸುವ ಮೂಲಕ ಬಿಹಾರ ರಾಜ್ಯ ಹಬ್ಬವನ್ನು ಆಚರಿಸಲಿದೆ. ಸಮಾವೇಶದಲ್ಲಿ ಮಾತನಾಡುವ ಮೊದಲು ಮೋದಿ ಅವರು ಬಿಹಾರ ರಾಜ್ಯಕ್ಕೆ ತಾವು ಈವರೆಗೂ ಏನೇನು ಮಾಡಿದ್ದೀರಿ ಎಂಬುದನ್ನು ಹೇಳಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಲಾಲೂ ಪ್ರಸಾದ್ ರಂತೆಯೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಮೋದಿ ಹೇಳಿಕೆ ವಿರುದ್ಧ ಟ್ವಿಟರ್ ಕಿಡಿಕಾರಿದ್ದು, 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ವಾಜಪೇಯಿಯವರು ತಮಗೆ ರಾಜಧರ್ಮವನ್ನು ಅನುಸರಿಸುವಂತೆ ಸಲಹೆ ನೀಡಿದ್ದರು ಎಂಬ ವಿಷಯ ಇಡೀ ದೇಶದ ಜನತೆಗೆ ಗೊತ್ತಿದೆ. ಇದನ್ನು ಮೋದಿ ಅವರು ಮರೆಯಬಾರದು. ಬಿಹಾರ ವನ್ನು ಅನಾರೋಗ್ಯ ಪೀಡಿತ ರಾಜ್ಯ ಎಂದು ಹೇಳುವ ಮೂಲಕ ಇದೀಗ ಬಿಹಾರ ರಾಜ್ಯಕ್ಕೆ ಅವಮಾನ ಮಾಡಿದ್ದೀರಿ ಎಂದು ಹೇಳಿದ್ದಾರೆ.