ನವದೆಹಲಿ: ಅಕ್ರಮ ಟೆಲಿಫೋನ್ ಎಕ್ಸ್ ಚೇಂಜ್ ಹಗರಣದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಹಾಗೂ ಡಿಎಂಕೆ ಮುಖಂಡ ದಯಾನಿಧಿ ಮಾರನ್ ಅವರು ಮೂರು ದಿನಗಳಲ್ಲಿ ಸಿಬಿಐ ಶರಣಾಗಬೇಕು ಎಂದು ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.
ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರನ್ನೊಳಗೊಂಡ ನ್ಯಾಯಪೀಠ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಿದೆ.
ಅಲ್ಲದೆ, ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಪ್ರಕರಣ ಸಂಬಂಧ 2013ರಿಂದ ಈವರೆಗೆ ಸಿಬಿಐ ಏನು ಮಾಡಿಲ್ಲ ಎಂದು ಕಿಡಿಕಾರಿದೆ. ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮೀಷನ್ ನಲ್ಲಿ ನಡೆದಿದೆ ಎನ್ನಲಾದ ರು.8,000 ಕೋಟಿ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಈವರೆಗೆ ಒಬ್ಬ ಆರೋಪಿಯನ್ನು ಬಂಧಿಸಿಲ್ಲ. ಆದರೆ, ಕಚೇರಿ ಮತ್ತು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ರು.2 ಕೋಟಿ ಅವ್ಯವಹಾರದ ಬಗ್ಗೆ ವಿಚಾರಣೆ ನಡೆಸಲು ಮಾರನ್ ಅವರನ್ನು ವಶಕ್ಕೆ ಕೇಳುತ್ತಿದ್ದೀರಲ್ಲ ಎಂದು ಸಿಬಿಐಗೆ ಪ್ರಶ್ನಿಸಿದೆ.
ದಯಾನಿಧಿ ಮಾರನ್ ಅರ್ಜಿ ಸಂಬಂಧ ಪ್ರತಿಕ್ರಯಿಸುವಂತೆ ಸಿಬಿಐಗೆ ಮೂರು ವಾರಗಳ ಗಡುವು ನೀಡಿರುವ ಸುಪ್ರೀಂ, ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಿದೆ.
ದಯಾನಿಧಿ ಮಾರನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿ, ಮೂರು ದಿನಗಳಲ್ಲಿ ಸಿಬಿಐ ಮುಂದೆ ಶರಣಾಗುವಂತೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ದಯಾನಿಧಿ ಮಾರನ್ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮಾರನ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಮಾರನ್ ಅವರ ಜಾಮೀನು ಅರ್ಜಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.