ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ
ಯುವತಿಯ ಮನೆಯವರ ವಿರೋಧದ ನಡುವೆಯೂ ಮದುವೆಯಾದ (24) ಯುವಕನೊಬ್ಬನನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆಯೊಂದು ಭಿವಂಡಿ ತೆಹಶೀಲ್‌ನ ಜಹೂ ನಂದೂರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ...
ಥಾಣೆ (ಮಹಾರಾಷ್ಟ್ರ): ಯುವತಿಯ ಮನೆಯವರ ವಿರೋಧದ ನಡುವೆಯೂ ಮದುವೆಯಾದ (24) ಯುವಕನೊಬ್ಬನನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆಯೊಂದು ಭಿವಂಡಿ ತೆಹಶೀಲ್‌ನ ಜಹೂ ನಂದೂರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಸತ್ಯಂ ಕರ್ಬಾರಿ ಎಂಬುವವನೇ ಮರ್ಯಾದಾ ಹತ್ಯೆಗೊಳಗಾದ ಯುವಕನಾಗಿದ್ದು, ಮೂರು ವರ್ಷಗಳ ಹಿಂದಷ್ಟೇ ಯುವತಿಯೊಬ್ಬಳನ್ನು ಆಕೆಯ ಕುಟುಂಬಸ್ಥರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದ. ನಿನ್ನೆ ರಾತ್ರಿ 17 ಜನರ ಗುಂಪೊಂದು ಸತ್ಯಂ ಕರ್ಬಾರಿ ಮೇಲೆ ದಾಳಿ ಮಾಡಿ ಹರಿತವಾದ ಆಯುಧ ಬಳಸಿ ಆತನನ್ನು ಕೊಚ್ಚಿ ಕೊಂದಿದ್ದು, ಇದೊಂದು ಮರ್ಯಾದಾ ಹತ್ಯೆಯಾಗಿದೆ ಎಂದು ಭಿವಂಡಿ ಪೊಲೀಸ್ ಠಾಣೆಯ ಪಿಎಸ್ಐ ವಿಜಯ್ ಶೀರ್ಷತ್ ತಿಳಿಸಿದ್ದಾರೆ.
ದಾಳಿಯಿಂದಾಗಿ ಸತ್ಯಂ ಕರ್ಬಾರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಸ್ತುತ ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದಾಳಿ ಮಾಡಿದ ಆರೋಪಿಗಳ ಪೈಕಿ ಪ್ರಮುಖ ಆರೋಪಿ ಯುವತಿಯ ಸೋದರ ಸಂಬಂಧಿ ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಇದೀಗ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.