ನವದೆಹಲಿ: ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ರಾಜನ್ ಕಟೋಚ್ ಅವಧಿಗೂ ಮುನ್ನ ತಮ್ಮ ಸ್ಛಾನದಿಂದ ಕೆಳಗಿಳಿದಿದ್ದಾರೆ. ರಾಜನ್ ಕಟೋಚ್ ಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಕರ್ನಾಲ್ ಸಿಂಗ್ ನೇಮಕವಾಗಿದ್ದು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜನ್ ಕಟೋಚ್ ಅವರ ಅಧಿಕಾರವಧಿ ಇನ್ನೂ ಎರಡು ತಿಂಗಳಿಗೂ ಹೆಚ್ಚು ಇತ್ತು.
ಬಿಜೆಪಿ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಉತ್ತಮವಾಗಿ ನಿರ್ನಹಿಸುತ್ತಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.
1938ರಲ್ಲಿ ಜವಹರ್ ಲಾಲ್ ನೆಹರೂ ಸ್ಥಾಪಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕಚೇರಿಯ ಸ್ವತ್ತು ಸೇರಿದಂತೆ ದೆಹಲಿಯಲ್ಲಿ ಪತ್ರಿಕೆಗೆ ಸೇರಿದ್ದ ಆಸ್ತಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ, ಕಾನೂನಿನ ನೀತಿ ನಿಯಮಗಳನ್ನು ಮುರಿದಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ದೂರು ದಾಖಲಿಸಿದ್ದರು. ಆದರೆ ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಯಾವುದೇ ದೂರು ದಾಖಲಾಗದಂತೆ ರಾಜನ್ ಕಟೋಚ್ ಗಾಂಧಿ ಕುಟುಂಕ್ಕೆ ಸಹಾಯ ಮಾಡಿದ್ದಾರೆಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜನ್ ಕಟೋಚ್ ಅವರನ್ನು ಜಾರಿ ನಿರ್ದೇಶನಾಲಯದ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಲಾಗಿದೆ.
ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಮುಖ್ಯಸ್ಥರಾಗಿದ್ದ ಕರ್ನಲ್ ಸಿಂಗ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.