ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಬಾಬು ತೆಲಂಗಾಣದ ಮೆಹಬೂಬ್ ನಗರದಲ್ಲಿ ಹಿಂದುಳಿದ ಗ್ರಾಮವನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
ಇತ್ತೀಚೆಗಷ್ಟೇ ತೆರೆ ಕಂಡ ಶ್ರೀಮಂತುಡು ಸಿನಿಮಾದಲ್ಲಿ ತನ್ನ ತಂದೆಯ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಪಾತ್ರದಲ್ಲಿ ನಟಿಸಿದ್ದ ಮಹೇಶ್ ಬಾಬು, ನಿಜ ಜೀವನದಲ್ಲೂ ತನ್ನ ತಂದೆಯ ಹುಟ್ಟೂರಾದ ಬುರ್ರಿಪಲೆಮ್ ಗ್ರಾಮವನ್ನು ದತ್ತು ಪಡೆಯಲು ತೀರ್ಮಾನಿಸಿದ್ದರು. ಆದರೆ ಶ್ರೀಮಂತುಡು ಚಿತ್ರ ವೀಕ್ಷಿಸಿದ ನಂತರ ತೆಲಂಗಾಣದ ಮಾಹಿತಿ ತಂತ್ರಜ್ಞಾನ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಟಿ ರಾಮ್ ರಾವ್ ಅವರು ಮೆಹಬೂಬ್ ನಗರದ ಹಿಂದುಳಿದ ಗ್ರಾಮವೊಂದನ್ನು ದತ್ತು ಸ್ವೀಕರಿಸುವಂತೆ ಸಲಹೆ ನೀಡಿದ್ದಾರೆ.
ಮಹೇಶ್ ಬಾಬು, ಆಂಧ್ರಪ್ರದೇಶದಲ್ಲಿರುವ ತಮ್ಮ ತಂದೆ ಕೃಷ್ಣ ಅವರ ಹುಟ್ಟೂರಿನ ಜೊತೆ ತೆಲಂಗಾಣದ ಮೆಹಬೂಬ್ ನಗರದ ಗ್ರಾಮವನ್ನೂ ದತ್ತು ಪಡೆಯುವುದಾಗಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಸರ್ಕಾರದ ಗ್ರಾಮಜ್ಯೋತಿ ಯೋಜನೆಯಡಿ ಮೆಹಬೂಬ್ ನಗರದಲ್ಲಿ ಹಿಂದುಳಿದ ಗ್ರಾಮವೊಂದನ್ನು ದತ್ತು ಪಡೆಯುವುದಾಗಿ ಮಹೇಶ್ ಬಾಬು ಹೇಳಿದ್ದಾರೆ.
ಹಿಂದುಳಿದ ಗ್ರಾಮಗಳ ಅಭಿವೃದ್ಧಿಗಾಗಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಆಗಸ್ಟ್ 17 ರಂದು ಗ್ರಾಮಜ್ಯೋತಿ ಯೋಜನೆಗೆ ಚಾಲನೆ ನೀಡಿದ್ದರು.