ಲಖನೌ: ದೇಶದ ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿರುವ ಖಾಪ್ ಪಂಚಾಯತ್ ಗಳು ಮತ್ತೊಂದು ಅಮಾನುಷ ಆದೇಶ ಹೊರಡಿಸಿದೆ. ಉತ್ತರ ಪ್ರದೇಶದ ಮೀರತ್ ನ ದಲಿತ ಸಹೋದರಿಯರನ್ನು ಅತ್ಯಾಚಾರ ಮಾಡುವಂತೆ ಗ್ರಾಮಸ್ಥರಿಗೆ ಖಾಪ್ ಪಂಚಾಯತ್ ಆದೇಶ ನೀಡಿದೆ.
ದಲಿತ ಸಹೋದರಿಯರ ಸಹೋದರ ಜಾಟ್ ಸಮುದಾಯದ ಯುವತಿಯನ್ನು ಪ್ರೀತಿಸಿ ಇತ್ತೀಚೆಗಷ್ಟೇ ಮತ್ತೊಬ್ಬನೊಂದಿಗೆ ಮದುವೆಯಾದ ಆಕೆಯನ್ನು ಅಪಹರಣ ಮಾಡಿದ್ದಕ್ಕಾಗಿ ಖಾಪ್ ಪಂಚಾಯತ್ ಈ ರೀತಿಯ ತೀರ್ಪು ನೀಡಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಖಾಪ್ ಪಂಚಾಯತ್ ನ ತೀರ್ಪಿನ ವಿರುದ್ಧ ಉತ್ತರ ಪ್ರದೇಶದ ಸ್ಥಳೀಯ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ್ದಾರೆ.
22 ವರ್ಷದ ಯುವಕ ಜಾಟ್ ಸಮುದಾಯಕ್ಕೆ ಸೇರಿದ 21 ವರ್ಷದ ಯುವತಿಯನ್ನು ಕಳೆದ ಮೂರು ವರ್ಷದಿಂದ ಪ್ರೇಮಿಸಿದ್ದ ಆದರೆ ಅಂತರ್ಜಾತಿ ವಿವಾಹಕ್ಕೆ ಯುವತಿ ಪೋಷಕರು ಒಪ್ಪಿಗೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರೂ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಖಾಪ್ ಪಂಚಾಯತ್, ಯುವತಿಯನ್ನು ಅಪಹರಿಸಿರುವ ಯುವಕ ವಾಪಸ್ಸಾಗದೇ ಇದ್ದರೆ ಅವನ ಸಹೋದರಿಯರ ಮೇಲೆ ಅತ್ಯಾಚಾರ ನಡೆಸುವಂತೆ ಗ್ರಾಮಸ್ಥರಿಗೆ ಆದೇಶ ನೀಡಿತ್ತು. ಯುವಕ- ಯುವತಿ ಇದಾದ ಎರಡು ದಿನಗಳ ಬಳಿಕ ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದರು.
ಇದಾದ ಕೆಲವೇ ದಿನಗಳಲ್ಲಿ ಹುಡುಗಿಗೆ ವಿವಾಹವೂ ನಡೆದಿದೆ. ಮದುವೆಯಾದ 15 ದಿನಗಳ ಬಳಿಕ ಹರ್ಯಾಣದಿಂದ ವಾಪಸ್ಸಾದ ಯುವತಿ ಮತ್ತೆ ಅದೇ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಯುವತಿಯೊಂದಿಗೆ ಪರಾರಿಯಾಗಿದ್ದ ಯುವನನ್ನು ಬಂಧಿಸಲಾಗಿದ್ದು, ಖಾಪ್ ಪಂಚಾಯತ್ ಆದೇಶದ ಬಗ್ಗೆ ತನಿಖೆ ನಡೆಯುತ್ತಿದೆ.