ಪಾಕ್ ಜೈಲಿನಲ್ಲಿರುವ ಸೈನಿಕರ ಬಿಡುಗಡೆಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವುದಿಲ್ಲ
1965 ಮತ್ತು 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಸೆರೆಯಾಗಿ ಪಾಕ್ ಜೈಲಿನಲ್ಲಿರುವ 54 ಭಾರತೀಯ ಸೈನಿಕರ ಬಿಡುಗಡೆಗಾಗಿ...
ನವದೆಹಲಿ: 1965 ಮತ್ತು 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಸೆರೆಯಾಗಿ ಪಾಕ್ ಜೈಲಿನಲ್ಲಿರುವ 54 ಭಾರತೀಯ ಸೈನಿಕರ ಬಿಡುಗಡೆಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಸಮೀಪಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜೈಲಿನಲ್ಲಿರುವ ಭಾರತೀಯ ಸೈನಿಕರು ಬದುಕಿದ್ದಾರೋ, ಸತ್ತಿದ್ದಾರೋ ಎಂಬುದರ ಬಗ್ಗೆ ಪಾಕ್ ಸರ್ಕಾರ ಈವರೆಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ಸೈನಿಕರ ಮುಕ್ತಿಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗದೆ ಇರುವುದೇಕೆ? ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
ಈ ಮೊದಲು ಕಾರ್ಗಿಲ್ ಯುದ್ಧದ ವೇಳೆ ಪಾಕ್ ಸೇನೆಯಿಂದ ಬಂಧಿಯಾಗಿ ಅತೀ ಕ್ರೂರವಾಗಿ ಹತ್ಯೆಗೀಡಾದ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ಪ್ರಕರಣದ ಬಗ್ಗೆಯೂ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈ ವಿಷಯಕ್ಕೆ ಸಂಬಂದಿಸಿದಂತೆ ಪಾಕ್ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವುದು ಪ್ರಾಯೋಗಿಕವಲ್ಲ ಎಂಬುದು ಕೇಂದ್ರ ಸರ್ಕಾರದ ನಿಲುವಾಗಿತ್ತು. ಈ ನಿಲುವು ವಿರುದ್ಧ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಸರ್ಕಾರ ನಿಲುವು ಬದಲಿಸಬೇಕಾಗಿ ಬಂತು.
ಏತನ್ಮಧ್ಯೆ, ನಿಲುವು ಬದಲಿಸಿದ ಕೇಂದ್ರ ಸರ್ಕಾರ ಕಾಲಿಯಾ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಸಮೀಪಿಸುವಲ್ಲಿ ಕಾರ್ಯ ಪ್ರವರ್ತರಾಗುವುದಾಗಿ ಭರವಸೆಯನ್ನೂ ನೀಡಿತು.