ನವದೆಹಲಿ: ದೇಶದಲ್ಲಿ ಆದಷ್ಟು ಬೇಗ ಮರಣದಂಡನೆಯನ್ನು ವಜಾ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕಾನೂನು ಆಯೋಗ ಶಿಫಾರಸು ಮಾಡಿದೆ. ಭಯೋತ್ಪಾದನೆ ಹಾಗೂ ದೇಶದ ವಿರುದ್ಧ ಸಮರ ಸಾರುವ ಆರೋಪ ಹೊರತು ಪಡಿಸಿ ಉಳಿದೆಲ್ಲ ಪ್ರಕರಣಗಳಲ್ಲೂ ಗಲ್ಲು ರದ್ದುಪಡಿಸಬೇಕೆಂದು ಅದು ಕೋರಿದೆ.
ಸೋಮವಾರ ಆಯೋಗವು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದ್ದು, ಗಲ್ಲುಶಿಕ್ಷೆಯನ್ನುವುದು ಸಂವಿಧಾನಾತ್ಮಕವಾಗಿ ಸುಸ್ಥಿರವಾದದ್ದಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ, 9 ಮಂದಿ ಸದಸ್ಯರ ಆಯೋಗವು ಸಲ್ಲಿಸಿದ ವರದಿ ಹಾಗೂ ವ್ಯಕ್ತಪಡಿಸಿರುವ ಅಭಿಪ್ರಾಯ ಅವಿರೋಧವಾದದ್ದಲ್ಲ. ಏಕೆಂದರೆ, ಒಬ್ಬ ಪೂರ್ಣಕಾಲಿಕ ಸದಸ್ಯ ಮತ್ತು ಸರ್ಕಾರದ ಇಬ್ಬರು ಪ್ರತಿನಿಧಿಗಳು ಗಲ್ಲುಶಿಕ್ಷೆ ರದ್ದು ರದ್ದು ಮಾಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಯನ್ನು ಇತರೆ ಅಪರಾಧಗಳಿಗಿಂತ ಭಿನ್ನ ಎಂದು ಹೇಳಲು ಯಾವುದೇ ಸಮರ್ಥನೆಗಳಿಲ್ಲ. ಆದರೂ, ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಉಗ್ರ ಕೃತ್ಯಗಳ ಅಪರಾಧಿಗಳಿಗೆ ಗಲ್ಲು ವಿಧಿಸಬಹುದು ಎಂದೂ ಆಯೋಗ ಹೇಳಿದೆ.