ನವದೆಹಲಿ: ದೇಶದ ಐಐಟಿ ನವ ಪದವೀಧರರಿಗೆ ಈ ಸಲ ಭರ್ಜರಿ ಅವಕಾಶಗಳು ದಕ್ಕುತ್ತಿವೆ. ಉದ್ಯೋಗವಕಾಶ ಸೇವೆಯ (ಪ್ಲೇಸ್ ಮೆಂಟ್) ಮೊದಲ ದಿನವೇ 40ಕ್ಕೂ ಹೆಚ್ಚು ನವ ಪದವೀಧರರಿಗೆ ವಾರ್ಷಿಕ 1 ಲಕ್ಷ ಡಾಲರ್ ಮೊತ್ತದ (ಸುಮಾರು ರು.66 ಲಕ್ಷ) ಸಂಬಳದ ಕೆಲಸದ ಆಹ್ವಾನ ಬಂದಿದೆ.
ಇದು ಇತರ ಭತ್ಯೆಗಳನ್ನು ಹೊರತುಪಡಿಸಿ ನಿಗದಿಗೊಳಿಸಲಾದ ಮೊತ್ತ. ದೇಶ ವಿದೇಶದ ಪ್ರಮುಖ ಕಂಪನಿಗಳು ಕಾನ್ಪುರ, ಮದ್ರಾಸ್, ಮುಂಬೈ, ರೂರ್ಕಿ, ಬಿಎಚ್‍ಯು, ದೆಹಲಿ ಹಾಗೂ ಗುವಾಹಟಿ ಐಐಟಿಗಳ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಸಂದರ್ಶನ ನಡೆಸಿದ್ದು ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ಕೆಲಸದ ಆಹ್ವಾನ ಬಂದಿದೆ. ಐಐಟಿ ಕಾನ್ಪುರದ ಮೂವರು ವಿದ್ಯಾರ್ಥಿಗಳಿಗೆ ರು.1.4 ಕೋಟಿ ವಾರ್ಷಿಕ ಸಂಬಳದ ಆಹ್ವಾನ ಬಂದಿದ್ದು, ಇದು ಮೊದಲ ದಿನದ ಉದ್ಯೋಗವಕಾಶ ಸಂದರ್ಶನದಲ್ಲೇ ಅತ್ಯಧಿಕ ಮೊತ್ತ.
ಐಐಟಿ ಕಾನ್ಪುರದಲ್ಲಿ 37 ಕಂಪನಿಗಳು ಪಾಲ್ಗೊಂಡಿದ್ದರೆ, ಬ್ರಿಟನ್‍ನ ಬ್ಲೂಮ್ ಬರ್ಗ್ ಇದೇ ಮೊದಲ ಬಾರಿ ಸಂದರ್ಶನ ನಡೆಸುತ್ತಿದೆ. ಫೇಸ್‍ಬುಕ್ ಕೂಡಾ ಕೋಟಿ ಲೆಕ್ಕದಲ್ಲಿ ವೇತನ ಆಹ್ವಾನ ನೀಡಿದ್ದರೂ, ಈ ವರ್ಷದ ಪದವೀಧರರನ್ನು ಬಿಟ್ಟು 2016ನೇ ಸಾಲಿನ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ಆಸಕ್ತಿ ತೋರಿದೆ.
ವೇತನ ಮಾಹಿತಿ ಬಹಿರಂಗ ಮಾಡಲ್ಲ:
ಇನ್ನು ಮುಂದೆ ಐಐಟಿಗಳು ತಮ್ಮ ವಿದ್ಯಾರ್ಥಿಗಳಿಗೆ ಸಿಗುವ ವೇತನದ ಆಫರ್ ಬಹಿರಂಗ ಮಾಡಲ್ಲ. ಇದಕ್ಕೆ ಕಾರಣವೂ ಇದೆಯಂತೆ. ಐಐಟಿಗಳಲ್ಲಿ ಭಾರಿ ಮೊತ್ತದ ವೇತನ ಸಿಕ್ತು ಎಂಬ ಸುದ್ದಿ, ಇತರೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಅನವಶ್ಯಕ ಒತ್ತಡ ಹೆಚ್ಚಿಸುತ್ತದೆ ಎಂದು ಐಐಟಿಯ ಉದ್ಯೋಗ ಅಭಿವೃದ್ಧಿ ಮುಖ್ಯಸ್ಥ ಪ್ರೊ. ಸುಧೀರ್ ಕುಮಾರ್ ಬರಾಯಿ ಹೇಳಿದ್ದಾರೆ.
ಯಾವ್ಯಾವ ಕಂಪನಿ?
ಆರೇಕಲ್, ಗೂಗಲ್, ಮೈಕ್ರೊಸಾಫ್ಟ್, ಫೇಸ್‍ಬುಕ್, ವಿಸಾ, ಇಂಡೀಡ್, ಬ್ಲೂಮ್ ಬರ್ಗ್, ಸ್ಯಾಮ್ ಸಂಗ್, ಗೋಲ್ಡ್‍ಮನ್, ಸರ್ವೀಸ್‍ನೌ, ಟೆಕ್ಸಾಸ್ ಇನ್‍ಸ್ಟ್ರುಮೆಂಟ್ಸ್, ಬಿಸಿಜಿ, ಟವರ್ ರೀಸರ್ಚ್ ಕ್ಯಾಪಿಟಲ್, ಸೋನಿ, ಕೋಡ್‍ನೇಶನ್, ಇನ್‍ಶಾಟ್ರ್ಸ್ ಮುಂತಾದ ವಿದೇಶಿ ಕಂಪನಿಗಳ ಜೊತೆ ವರ್ಲ್ಡ್ ಕ್ವಾಂಟ್‍ನಂಥ ದೇಸಿ ಕಂಪನಿಯೂ ಸೇರಿದೆ.