ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿದ ಭಾಷಣವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಮೂರ್ತಿ ಅವರು ಫೇಸ್ ಬುಕ್ ಬಳಸಿಕೊಂಡಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿದಂತೆ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ಸಂದೇಶಗಳು ಬರುತ್ತಿದ್ದು, ಎಲ್ಲರಿಗೂ ಖುದ್ದು ಈ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯವಾಗದ ಕಾರಣ ಫೇಸ್ ಬುಕ್ ಅನ್ನು ಬಳಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅದನ್ನು ಕಳೆದ ಹಲವು ಸಂದರ್ಶನಗಳಲ್ಲಿ ಅಭಿವ್ಯಕ್ತಗೊಳಿಸಿದ್ದೇನೆ. ವಾಟ್ಸ್ ಆ್ಯಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾಷಣ ನಕಲಿಯಾಗಿದ್ದು, ಅದು ನನ್ನ ಮಾತು ಹಾಗೂ ಬರಹಕ್ಕೆ ವ್ಯತಿರಿಕ್ತವಾಗಿದೆ ಎಂದು ಹೇಳಿಕೊಂಡಿದ್ದಾರೆ.