ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್
ನವದೆಹಲಿ: ``ಎಲ್ಲಿಯವರೆಗೆ ನ್ಯಾಯಾಂಗವು ಸ್ವತಂತ್ರವಾಗಿರುತ್ತದೋ, ಅಲ್ಲಿಯವರೆಗೆ ಜನರ ಹಕ್ಕುಗಳನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಯಾರೂ ಭಯಪಡಬೇಕಿಲ್ಲ.''
ಇದು ದೇಶದ ನೂತನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರ ಮನದಾಳದ ಮಾತು. ದೇಶದೆಲ್ಲೆಡೆ ಅಸಹಿಷ್ಣುತೆಯ ವಿಚಾರ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಜೆಐ ಅವರ ಈ ಮಾತುಗಳು ಮಹತ್ವ ಪಡೆದಿವೆ.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಿಜೆಐ ಠಾಕೂರ್ ಅವರ ಅಸಹಿಷ್ಣುತೆಗೆ ಸಂಬಂಧಿಸಿದ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದ್ದಾರೆ.
``ಅಸಹಿಷ್ಣುತೆ ಎನ್ನುವುದು ರಾಜಕೀಯ ವಿಚಾರ. ರಾಜಕಾರಣಿಗಳು ನೀಡುವ ಹಾಗೆ ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವ ನ್ಯಾ.ಠಾಕೂರ್, ``ಎಲ್ಲಿಯವರೆಗೆ ನಮ್ಮಲ್ಲಿ ನ್ಯಾಯ ಪರಿಪಾಲನೆ ಇರುತ್ತದೆಯೋ, ಸ್ವತಂತ್ರ ನ್ಯಾಯಾಂಗ ವಿರುತ್ತದೋ, ನ್ಯಾಯಾಲಯಗಳು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಭಾಯಿಸುತ್ತವೆಯೋ ಅಲ್ಲಿಯವರೆಗೆ ಯಾರೂ ಭಯ ಪಡಬೇಕಾಗಿಲ್ಲ, ಎಲ್ಲ ವರ್ಗಗಳ, ಎಲ್ಲ ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗ ಸಮರ್ಥ ಎಂದಿದ್ದಾರೆ.