ಗುವಾಹಟಿ: ಅಸ್ಸಾಂ ಕಾಂಗ್ರೆಸ್‍ನೊಳಗಿನ ಭಿನ್ನಮತ ಸ್ಫೋಟಗೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ 7 ಮಂದಿ ಕಾಂಗ್ರೆಸ್ ಶಾಸಕರು ಸೋಮವಾರ ಅಸೆಂಬ್ಲಿಯಲ್ಲೇ ಬಿಜೆಪಿ ಸೇರಿದ ಘಟನೆ ನಡೆಯಿತು.
ಈ ಹಿನ್ನೆಲೆಯಲ್ಲಿ 12 ಮಂದಿ ಶಾಸಕರನ್ನು 5 ದಿನಗಳ ಕಾಲ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಿ ಸ್ಪೀಕರ್ ಆದೇಶ ಹೊರಡಿಸಿದ ನಾಟಕೀಯ ಬೆಳವಣಿಗೆಗೂ ಅಸ್ಸಾಂ ವಿಧಾನಸಭೆ ಸಾಕ್ಷಿಯಾಯಿತು.
ಬಿಜೆಪಿ ಸೇರಿದ 7 ಕಾಂಗ್ರೆಸ್ ಶಾಸಕರು ಮತ್ತು ಬಿಜೆಪಿಯ ಐವರು ಶಾಸಕರನ್ನು ಸದನದಲ್ಲಿ ಗದ್ದಲ ಉಂಟುಮಾಡಿದ್ದಕ್ಕೆ ಮತ್ತು ತನ್ನ ಸೂಚನೆ ಪಾಲಿಸದ್ದಕ್ಕೆ ಸ್ಪೀಕರ್ ಪ್ರಣಬ್ ಗೊಗೋಯ್ ಅಮಾನತು ಮಾಡಿದ್ದಾರೆ. ಜತೆಗೆ, ತನ್ನ ನಿರ್ಧಾರ ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.