ನವದೆಹಲಿ: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕರಿಗೆ ಪಾಕಿಸ್ತಾನದವರೇ ಆರ್ಥಿಕ ಸಹಾಯ ಮಾಡುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ.
ಡಿ.6 ರಂದು ನಡೆದ ಭಾರತ-ಪಾಕ್ ಎನ್.ಎಸ್.ಎ ಮಟ್ಟದ ದ್ವಿಪಕ್ಷೀಯ ಸಭೆಯಲ್ಲಿ ಭಯೋತ್ಪಾದನೆ ವಿಷಯವನ್ನು ಪ್ರಸ್ತಾಪಿಸಿದ್ದ ಅಜಿತ್ ದೋವಲ್, ಪಾಕಿಸ್ತಾನದಲ್ಲಿರುವವರೇ ನೀಡಲಾಗುತ್ತಿರುವ ಆರ್ಥಿಕ ನೆರವಿನಿಂದಲೇ ಭಯೋತ್ಪಾದನೆ ಮುಂದಿವರೆದಿದೆ ಎಂದು ನೇರವಾಗಿ ಹೇಳಿರುವ ಭಾರತ ಸರ್ಕಾರ ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಈ ಕುರಿತಾದ ದಾಖಲೆಗಳನ್ನೂ ಒದಗಿಸಿದೆ.
ಭಾರತ ಸರ್ಕಾರದ ದಾಖಲೆಗಳ ಪ್ರಕಾರ, ಉಗ್ರ ಹಫೀಜ್ ಸಯೀದ್ ನ ಜಮಾತ್-ಉದ್- ದವಾ ಸಂಘಟನೆ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆಗೆ ಫಲಾಹ್-ಎ-ಇನ್ಸಾನಿಯತ್ ಚಾರಿಟಿ ಸಂಸ್ಥೆ ಮೂಲಕ ಆರ್ಥಿಕ ನೆರವು ನೀಡುತ್ತಿದೆ. ಆದರೆ ಇದರ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನು ಜಮ್ಮು-ಕಾಶ್ಮೀರ ಭಾಗಕ್ಕೆ ಮಾರಕವಾಗಿರುವ ಹಿಜ್ಬುಲ್- ಮುಜಾಹಿದ್ದೀನ್ ಉಗ್ರ ಸಂಘಟನೆ ಅಲ್- ಹಿಲಾಲ್ ಟ್ರಸ್ಟ್ ನ್ನು ಆರ್ಥಿಕ ಮೂಲವಾಗಿ ಬಳಸಿಕೊಳ್ಳುತ್ತಿದೆ ಎಂದು ಭಾರತ ಸರ್ಕಾರ ತಿಳಿಸಿದೆ. ಎಫ್ಐಎಫ್ ಹಾಗೂ ಅಲ್ ಹಿತಲ್ ಚಾರಿಟಿ ಸಂಸ್ಥೆಗಳಿಗೆ ಖುದ್ದು ಪಾಕಿಸ್ತಾನ ಅಧಿಕಾರಿಗಳೇ ಸಹಕಾರ ನೀಡುತ್ತಿರುವ ಬಗ್ಗೆಯೂ ಭಾರತ ಸರ್ಕಾರ ಪಾಕಿಸ್ತಾನಕ್ಕೆ ದಾಖಲೆಗಳನ್ನು ನೀಡಿದೆ. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಐಎಸ್ಐ ನಿಂದ ಉತ್ಪತ್ತಿಯಾಗುತ್ತಿರುವ ಗುಪ್ತ ನಿಧಿಯನ್ನು ಸಿಖ್ ಮೂಲಭೂತವಾದಿಗಳ ಮೂಲಕ ಭಾರತ ವಿರೋಧಿ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.