ವಾಷಿಂಗ್ಟನ್/ಲಾಸ್‍ಏಂಜಲೀಸ್: ಅಮೆರಿಕಕ್ಕೆ ಮುಸ್ಲಿಮರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬಾರದು ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಹೇಳಿಕೆ ಅಮೆರಿಕದ ಭದ್ರತೆಗೆ ಧಕ್ಕೆ ತರುವಂಥದು ಎಂದು ಶ್ವೇತಭವನ ಹಾಗೂ ಪೆಂಟಗಾನ್ ಹೇಳಿವೆ.
ಇಸ್ಲಾಮ್ ಧರ್ಮದ ಹೆಸರಲ್ಲಿ ಐಎಸ್ ಸಂಘಟನೆ ತನ್ನ ಕೆಲಸಗಳನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ. ಲಕ್ಷಾಂತರ ಮುಸ್ಲಿಮರು ಈ ಭಯೋತ್ಪಾದಕ ಸಂಸ್ಥೆಯನ್ನು ಮಟ್ಟ ಹಾಕುವ ಅಮೆರಿಕದ ಹಾಗೂ ಅಂತಾರಾಷ್ಟ್ರೀಯ ಪ್ರಯತ್ನಗಳ ಪರವಾಗಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಹೇಳಿದ್ದಾರೆ.
ಇಂಥದೇ ಹೇಳಿಕೆ ನೀಡಿರುವ ಪೆಂಟಗಾನ್, ಹೇಳಿಕೆ ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆಯಷ್ಟೇ ಅಲ್ಲ, ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಅವರ ಹೇಳಿಕೆ ನಿಜಕ್ಕೂ ಅಪಾಯಕಾರಿ ಎಂದು ಪ್ರತಿಕ್ರಿಯೆ ನೀಡಿದೆ.
ತಮ್ಮ ಹೇಳಿಕೆಗೆ ಪಕ್ಷ, ದೇಶ ಹಾಗೂ ವಿದೇಶಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಕ್ಷ ತೊರೆಯುವ ಬೆದರಿಕೆ ಒಡ್ಡಿದ್ದಾರೆ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್.
ಕೆರಳಿದ ಕೆನಡಾ: ಟ್ರಂಪ್ ಹೇಳಿಕೆಗೆ ಕೆನಡಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜನಪ್ರತಿನಿಧಿಗಳ ಆಶಯಗಳನ್ನು ಪ್ರತಿನಿಧಿಸಿದ ಪ್ರಧಾನಿ ಟ್ರೂಡಾ, ಅಂಥ ಸ್ಥಾನದಲ್ಲಿರುವ ವ್ಯಕ್ತಿ ಇತರ ದೇಶಗಳ ವ್ಯವಹಾರಗಳಲ್ಲಿ ಮೂಗು ತೂರಿಸಬಾರದು ಎಂದಿದ್ದಾರೆ.
ದ್ವೇಷ ಕಾರುವ ಇಂಥ ವ್ಯಕ್ತಿಗಳಿಗೆ ಕೆನಡಾದೊಳಗೆ ಪ್ರವೇಶ ನೀಡಬಾರದು ಎಂದು ಪಕ್ಷಗಳು ಅಭಿಪ್ರಾಯಪಟ್ಟರೆ, ವ್ಯಾಂಕೋವರ್ ನಾಗರಿಕರು, ಕಟ್ಟಡದಲ್ಲಿರುವ ಟ್ರಂಪ್ ಹೆಸರನ್ನು ತೆಗೆದುಹಾಕಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics