ಜಮ್ಮು: ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ಯುವಕನನ್ನು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆ ಅಧಿಕಾರಿಗಳು ಭಾರತೀಯ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
2015ರ ಜೂನ್ 12ರಂದು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಗಡಿ ದಾಟಿ ಹೋಗಿದ್ದ ಪೂಂಚ್ ಜಿಲ್ಲೆಯ ದೆಗ್ವಾರ್ ತೆರೌನ್ ಗ್ರಾಮದ ಸತ್ತಾರ್ ದಿನ್ ಪುತ್ರ 22 ವರ್ಷದ ಮೊಹಮ್ಮದ ರಷೀದ್ ಭಾರತೀಯ ಪ್ರಜೆಯನ್ನು ಪಾಕಿಸ್ತಾನಿ ಪಡೆಗಳು ಗಡಿ ನಿಯಂತ್ರಣ ರೇಖೆಯ ಚಕನ್-ಡಾ-ಬಾಗ್ ಕ್ರಾಸಿಂಗ್ನಲ್ಲಿ ಭಾರತೀಯ ಅಧಿಕಾರಿಗಳಿಗೆ ಕಳೆದ ಸಂಜೆ ಹಸ್ತಾಂತರಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.
ಗುತ್ತಿಗೆ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ ರಷೀದ್ ಯಾವ ಕಾರಣಕ್ಕಾಗಿ ಭಾರತದ ಗಡಿದಾಟಿ ಪಾಕ್ ಕಡೆಗೆ ಹೋದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಷೀದ್ ತಂದೆ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದರು’ ಎಂದು ವಕ್ತಾರ ಹೇಳಿದರು.