ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮಸೂದೆ(ಜಿಎಸ್ ಟಿ) ಜಾರಿ ವಿಳಂಬವಾಗುತ್ತಿದ್ದು ಮಸೂದೆ ಜಾರಿಯಿಂದಾಗಬೇಕಿದ್ದ ಪ್ರಯೋಜನಗಳನ್ನು ತಲುಪಿಸಲು ಕೇಂದ್ರ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಲಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ.
ರೋಟರಿ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಿಯೂಷ್ ಗೋಯೆಲ್, ಸದ್ಯಕ್ಕೆ ಜಿಎಸ್ ಟಿ ಮಸೂದೆ ಅಂಗೀಕಾರವಾಗದೇ ಇರುವುದರಿಂದ ಉದ್ಯಮ ಹಾಗೂ ಕೈಗಾರಿಕೆಗಳಿಗೆ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಿ, ಕಾಯ್ದೆಯ ಪ್ರಯೋಜನಗಳನ್ನು ತಲುಪಿಸಲು ಕೇಂದ್ರ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಲು ತೀರ್ಮಾನಿಸಿದೆ.
ತೆರಿಗೆ ಸುಧಾರಣೆಯಲ್ಲಿನ ಮಹತ್ವದ ಕ್ರಮವಾಗಿರುವ ಜಿಎಸ್ ಟಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯುವುದು ಬಾಕಿ ಇದೆ. ರಾಜ್ಯಸಭೆಯಲ್ಲಿ ಎನ್ ಡಿಎ ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ಜಿಎಸ್ ಟಿ ಮಸೂದೆ ಹಾಗೆಯೇ ಉಳಿದಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್, ಇತರ ಕೆಲವು ವಿರೋಧ ಪಕ್ಷಗಳ ಪ್ರತಿಭಟನೆ ನಡೆದು, ಕಲಾಪ ವ್ಯರ್ಥವಾಗುತ್ತಿದ್ದ ಕಾರಣ, ನ.18 ರಂದು ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆದಿತ್ತು. ಸರ್ವಪಕ್ಷ ಸಭೆಯಲ್ಲಿ ಜಿಎಸ್ ಟಿ ಮಸೂದೆಯೊಂಡನ್ನು ಹೊರತುಪಡಿಸಿ ಉಳಿದ ಎಲ್ಲಾ ಮಸೂದೆಗಳಿಗೂ ಬೆಂಬಲ ನೀಡುವುದಾಗಿ ವಿಪಕ್ಷಗಳು ತಿಳಿಸಿದ್ದವು.