ಕಲಾಂ ದಫನ ಸ್ಥಳ (ಕೃಪೆ: ಫೇಸ್ ಬುಕ್ )
ಚೆನ್ನೈ: 5 ತಿಂಗಳ ಹಿಂದೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಮ್ಮನ್ನಗಲಿದಾಗ ಇಡೀ ದೇಶಕ್ಕೆ ದೇಶವೇ ಕಣ್ಣೀರು ಹಾಕಿತ್ತು. ಆದರೆ ಇದೀಗ ರಾಮೇಶ್ವರಂನ ಪೈಕರುಂಬ್‌ನಲ್ಲಿರುವ ಕಲಾಂ ದಫನ ಸ್ಥಳದತ್ತ ಗಮನ ಹರಿಸುವವರು ಯಾರೂ ಇಲ್ಲ ಎಂಬಂತಾಗಿದೆ.
ಕಲಾಂ ಅಗಲಿದಾಗ ಅವರಿಗೆ ರಾಮೇಶ್ವರಂ ನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ಹೇಳಿದ್ದರೂ, ಇಲ್ಲಿಯವರೆಗೆ ಸ್ಮಾರಕ ನಿರ್ಮಾಣದ ಬಗ್ಗೆ ಯಾವುದೇ ಸೂಚನೆ ಸಿಕ್ಕಿಲ್ಲ.
ಅವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟರು. ಅಂಥಾ ಮನುಷ್ಯನನ್ನು ಈ ರೀತಿ ಕಡೆಗಣಿಸಲಾಗುತ್ತಿದೆ. ಇದೇನಾ ಗೌರವ? ಎಂದು ಕಲಾಂ ಅವರ ಸಹೋದರನ ಮೊಮ್ಮಗ ಸಲೀಂ ಪ್ರಶ್ನಿಸಿದ್ದಾರೆ.
ಅದೇ ವೇಳೆ ಕಲಾಂ ಅವರ ಸ್ಮಾರಕ ಬಗ್ಗೆ ಕಡೆಗಣನೆ ತೋರಿಸುವುದನ್ನು ನಿಲ್ಲಿಸಿ. ಆದಷ್ಟು ಬೇಗ ಸ್ಮಾರಕ ನಿರ್ಮಿಸಿ ಎಂಬ ಬೇಡಿಕೆಯನ್ನೊಡ್ಡಿ ಬಾಹ್ಯಾಕಾಶ ಮತ್ತು ರಕ್ಷಣಾ ಇಲಾಖೆಯ ಮಾಜಿ ಪತ್ರಕರ್ತ ಅನಂತ ಕೃಷ್ಣನ್ ಫೇಸ್ ಬುಕ್‌ನಲ್ಲಿ Justice4GuruKalam ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ದಫನ ಸ್ಥಳದಲ್ಲಿ ಈಗ ಬೆಕ್ಕು, ನಾಯಿ ಕಕ್ಕ ಮಾಡಿ ಹೋಗುತ್ತಿದೆ. ಅತ್ತಲಿಂದ ಹಾದು ಹೋಗುವ ಜನರು ಬ್ಯಾರಿಕೇಡ್ ಒಳಗೆ ನುಸುಳಿ ಫೋಟೋ ತೆಗೆದುಕೊಂಡು ಹೋಗುತ್ತಾರೆ. ಆ ಸ್ಥಳವನ್ನು ಕಾಪಾಡಲು ಯಾವುದೇ ವ್ಯವಸ್ಥೆ ಅಲ್ಲಿಲ್ಲ.
ರಾಮೇಶ್ವರಂ ಚಂಡಮಾರುತ ಪೀಡಿತ ಪ್ರದೇಶವಾಗಿದ್ದು, ಅಲ್ಲಿ ತಾತ್ಕಾಲಿಕವಾಗಿ ಏನೇ ನಿರ್ಮಿಸಿದರು ಅದು ಬೇಗನೆ ಕುಸಿದು ಹೋಗುವ ಸಾಧ್ಯತೆಯಿದೆ. ಕಲಾಂ ದಫನ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಇಷ್ಟೊಂದು ವಿಳಂಬ ಯಾಕೆ? ಅದೇನು ರಾಕೆಟ್ ಸಯನ್ಸ್ ಅಲ್ವಲ್ಲಾ? ಎಂದು ಎಂದು ಅನಂತ ಕೃಷ್ಣನ್ ಹೇಳಿದ್ದಾರೆ.
ಸಾಮಾನ್ಯವಾಗಿ ಕುಟುಂಬದಲ್ಲಿ ಯಾರಾದರೂ ಮರಣಹೊಂದಿದರೆ ಅವರನ್ನು ಮನೆಯ ವಠಾರದಲ್ಲಿ ದಫನ ಮಾಡಲಾಗುತ್ತದೆ. ಹಾಗೆ ದಫನ ಮಾಡಿದ ಸ್ಥಳಗಳನ್ನು ಕುಟುಂಬವೇ ಕಾಪಾಡುತ್ತದೆ. ಇಲ್ಲಿ ಕಲಾಂ ಮೇರು ವ್ಯಕ್ತಿಯಾಗಿರುವುದರಿಂದ ಜನರು ಭೇಟಿ ನೀಡಲು ಅನುಕೂಲವಾಗುವಂತಹ ಸ್ಥಳದಲ್ಲಿ ಕಲಾಂ ಮೃತದೇಹ ದಫನ ಮಾಡಲು ಅವರ ಕುಟುಂಬ ಅನುಮತಿ ನೀಡಿತ್ತು. ಆದರೆ ಇಲ್ಲಿ ಆಗಿರುವುದಾದರೂ ಏನು? ರಾಮೇಶ್ವರಂ ನಲ್ಲಿ ದಫನ ಮಾಡಿರುವುದರಿಂದ ಅತ್ತ ಕುಟುಂಬದವರಿಗೂ ಈ ಸ್ಥಳವನ್ನು ರಕ್ಷಣೆ ಮಾಡಲು ಸಾಧ್ಯವಾಗದಂತಾಗಿದೆ.
ಆದಾಗ್ಯೂ, ಕಲಾಂ ಸ್ಮಾರಕ ನಿರ್ಮಾಣಕ್ಕೆ ಯಾಕಿಷ್ಟು ವಿಳಂಬವಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಸ್ಮಾರಕ ನಿರ್ಮಾಣ ಆಗುವ ವರೆಗೆ ಪುಟ್ಟ ಚಾವಣಿ , ಅಡ್ಡಗೋಡೆಯೊಂದನ್ನು ನಿರ್ಮಿಸಿ ಆ ಸ್ಥಳವನ್ನು ಕಾಪಾಡಬಹುದಲ್ಲವೇ? ಎಂದು ಅನಂತ ಕೃಷ್ಣನ್ ಪ್ರಶ್ನಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos