ವಾಷಿಂಗ್ಟನ್: ಭಾರತಕ್ಕೆ ಭೇಟಿ ನೀಡಿದ್ದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ. ಅಮೆರಿಕ ಮತ್ತು ಭಾರತದ ನಡುವೆ ಉತ್ತಮ ಬಾಂಧವ್ಯ ಇದೆ. ಆದರೆ, ಇದಕ್ಕೆ ವಿಶೇಷ
ಅರ್ಥ ಕಲ್ಪಿಸಬೇಕಿಲ್ಲ. ಈ ಬಗ್ಗೆ ಚೀನಾ ಭಯಪಡುವ ಅಗತ್ಯ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಸಿಎನ್‍ಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಒಬಾಮ, ಭಾರತ ಮತ್ತು ಅಮೆರಿಕ ನಡುವೆ ಮೊದಲಿನಂದಲೂ ಉತ್ತಮ ಸಂಬಂಧ ಇದೆ ಎಂದಿದ್ದಾರೆ. ಅಮೇರಿಕ ಅಧ್ಯಕ್ಷರ ಭೇಟಿ ಹಿಂದೆ ಭಾರತ ಚೀನಾ ನಡುವಿನ ಭಾಂದವ್ಯಕ್ಕೆ ಬಿರುಕು ತರುವ ಹುನ್ನಾರ ಇದೆ ಎಂದು ಚೀನಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಒಬಾಮ, ಈ ಹೇಳಿಕೆ ನನಗೆ ಆಶ್ಚರ್ಯ ತರಿಸಿದೆ. ಎರಡೂ ಪ್ರಜಾಪ್ರಭುತ್ವವೇ ಇರುವುದರಿಂದ ಹೆಚ್ಚಿನ ಸಂಗತಿಗಳು, ಮೌಲ್ಯಗಳಲ್ಲಿ ಸಾಮ್ಯತೆ ಇದೆ. ಆದರೆ, ಚೀನಾದಲ್ಲಿ ಹಾಗೆ ಇಲ್ಲ. ಹೀಗಿರುವ ಕಾರಣ ನಮ್ಮ ದೇಶದ ಪ್ರಜೆಗಳಿಗೂ ಭಾರತ ಎಂದರೆ ಹತ್ತಿರ ಎಂಬ ಮನೋಭಾವ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ದೇಶಗಳೂ ಸಹ ಗೆಲ್ಲುವ ತಂತ್ರವನ್ನು ಅನುಸರಿಸಬೇಕು. ಈ ನಿಟ್ಟಿನಲ್ಲೇ ಒಂದೇ ನೀತಿ, ನಿಯಮವನ್ನು ಅಳವಡಿಸಿಕೊಳ್ಳಬೇಕೆಂಬ ನಂಬಿಕೆಯನ್ನು ಇಟ್ಟುಕೊಂಡವನು ನಾನಾಗಿದ್ದೇನೆ. ಎಲ್ಲರೂ ಒಟ್ಟಿಗೆ ಸಾಗಬೇಕು, ಇನ್ನೊಬ್ಬರಿಗೆ ಹೊರೆಯಾಗದಂತೆ ನಮ್ಮ ದೇಶದ ಜನರ ಏಳ್ಗೆಯನ್ನೂ ನಾವು ಬಯಸಬೇಕು ಎಂದು ಹೇಳಿದ್ದಾರೆ.