ದೇಶ

ಸೌದಿ ದೊರೆಗಳಿಗಾಗಿ 'ಹುಬಾರಾ ಬಸ್ಟರ್ಡ್‌' ಹಕ್ಕಿ ಸಂತತಿ ಬಲಿ

Vishwanath S

ಲಂಡನ್: ಸೌದಿದೊರೆಗಳ ಮೋಜಿನ ಬೇಟೆ, ಪಾಕಿಸ್ತಾನದ ಹಣದಾಸೆಗೆ ಅಪರೂಪದ ವಲಸೆ ಹಕ್ಕಿ 'ಹುಬಾರಾ ಬಸ್ಟರ್ಡ್‌' ಸಂತತಿಯೇ ವಿನಾಶದ ಅಂಚು ತಲುಪಿದೆ.

ಈ ಹಕ್ಕಿಯ ಮಾಂಸದಲ್ಲಿ ಕಾಮೋದ್ದೀಪನ ಶಕ್ತಿ ಇದೆ ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳ ರಾಜರು, ಶ್ರೀಮಂತರು ಪಾಕಿಸ್ತಾನದಲ್ಲಿ ಭಾರಿ ಬೇಟಿಗೆ ಇಳಿಯುತ್ತಿದ್ದಾರೆ.

ಒಂದು ಕಾಲದಲ್ಲಿ ಈ ಹುಬಾರಾ ಬಸ್ಟರ್ಡ್ ಸೌದಿ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿತ್ತು. ಆದರೆ, ಸೌದಿ ದೊರೆಗಳ, ಶ್ರೀಮಂತರ ಬೇಟೆ ಹುಚ್ಚಿನಿಂದಾಗಿ ಇವುಗಳ ಸಂತತಿಯೇ ವಿನಾಶದ ಅಂಚಿಗೆ ತಲುಪಿತು. ಅದಕ್ಕಾಗಿ ಈಗ ಸೌದಿ ದೊರೆಗಳು, ಶ್ರೀಮಂತರು ಈಗ ಬೇಟೆಗೆ ಪಾಕ್‌ಗೆ ತೆರಳುತ್ತಿದ್ದಾರೆ.

ಚಳಿಗಾಲದಲ್ಲಿ ಹೆಚ್ಚಾಗಿ ಪಾಕ್ ಮತ್ತು ಆಫ್ಘನ್ ಗಡಿಯಲ್ಲಿ ಕಾಣಸಿಗುವ ಈ ಹಕ್ಕಿಯ ಬೇಟೆಗೆಂದೇ ಪಾಕ್‌ನ ಮರುಭೂಮಿಯಲ್ಲಿ ಪ್ರತ್ಯೇಕ ಏರ್‌ಸ್ಟ್ರಿಪ್‌ಗಳನ್ನು ನಿರ್ಮಿಸಲಾಗಿದೆ. ಸೌದಿಯಿಂದ ಕಾರ್ಗೋ ವಿಮಾನಗಳು ಟೆಂಟ್‌ಗಳು ಮತ್ತು ಐಷಾರಾಮಿ ಜೀಪ್‌ಗಳೊಂದಿಗೆ ಇಲ್ಲಿ ಬಂದಿಳಿಯುತ್ತವೆ. ಇದರ ಬೆನ್ನಲ್ಲೇ ಖಾಸಗಿ ವಿಮಾನ ಗಳಲ್ಲಿ ಸೌದಿ ಮತ್ತು ಪರ್ಶಿಯನ್ ದೇಶಗಳ ದೊರೆಗಳು ಪಾಕ್‌ಗೆ ಆಗಮಿಸುತ್ತಾರೆ.

ಆದರೆ, ಈ ಬಾರಿ ಇಂಥ ಬೇಟೆ ವಿವಾದಕ್ಕೆ ಗುರಿಯಾಗಿದೆ. ಪರಿಸರ ಪ್ರೇಮಿಗಳು ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ವಿದೇಶಿಗರಿಗೆ ನೀಡಲಾಗಿರುವ ಬೇಟೆ ಪರವಾನಗಿಯನ್ನೇ ಬಲೂಚಿಸ್ತಾನದ ಹೈಕೋರ್ಟ್ ರದ್ದು ಮಾಡಿದೆ. ಈ ಹಕ್ಕಿ ಸಂತತಿಯೇ ವಿನಾಶದ ಅಂಚಿಗೆ ತಲುಪಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಪರಿಸರ ಪ್ರೇಮಿಗಳು ಈ ರೀತಿ ಕೋರ್ಟ್ ಮೆಟ್ಟಿಲೇರಲು ಪ್ರಮುಖ ಕಾರಣವಾಗಿದ್ದು ಸೌದಿಯ ತಾಬೂಕ್ ಪ್ರಾಂತ್ಯದ ದೊರೆ ಫಹಾದ್ ಬಿನ್ ಸುಲ್ತಾನ್ ಅಬ್ದುಲ್ ಅಜೀಜ್ ಕಳೆದ ವರ್ಷ ಕೇವಲ 21 ದಿನಗಳಲ್ಲಿ 2,100 ಹಕ್ಕಿಗಳನ್ನು ಕೊಂದಿದ್ದಾರೆ.

ಈ ವರದಿ ಮಾಧ್ಯಮದಲ್ಲಿ ಬಹಿರಂಗವಾಗುತ್ತಿದ್ದಂತೆ ಪಾಕಿಸ್ತಾನದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇಷ್ಟಾದರೂ ಕಳೆದ ವಾರ ಫಹಾದ್ ದಾಲ್ಬದಿನ್‌ನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸರ್ಕಾರದಿಂದಲೇ ರಾಜಮರ್ಯಾದೆ ನೀಡಲಾಗಿತ್ತು. ಸೌದಿಯಿಂದ ಪಾಕ್‌ಗೆ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬರುತ್ತಿದೆ. ಹೀಗಾಗಿ ಸೌದಿಯ ಜತೆಗಿನ ಸಂಬಂಧದ ಬೆಸುಗೆಯನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಈ ಹುಬಾರಾ ವನ್ನು ಒಂದು ಮಾಧ್ಯಮವಾಗಿ ಬಳಸಿಕೊಳ್ಳುತ್ತಿದೆ ಅಂದಹಾಗೆ 1970ರಿಂದಲೇ ಈ ಹಕ್ಕಿಯ ಬೇಟೆಗೆ ಪಾಕ್ ಸೌದಿ ದೊರೆಗಳಿಗೆ ಅವಕಾಶ ಮಾಡಿಕೊಟ್ಟಿತ್ತು.

SCROLL FOR NEXT