ನೊಯ್ಡಾ: ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತ ಉಗ್ರರಿಂದ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ನಡೆಸಿದ ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಬಂಧಿತ ಶಂಕಿತ ಉಗ್ರರು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ರಫತ್ ಉಲ್ಲಾ ಹಾಗೂ ಅಬ್ದುಲ್ ಅಜೀಜ್ ಬಂಧಿತ ಶಂಕಿತ ಉಗ್ರರಾಗಿದ್ದಾರೆ. ರಫತ್ ಉಲ್ಲಾ ಬಾಂಗ್ಲಾದೇಶದ ಮೂಲದವನಾಗಿದ್ದಾನೆ ಎಂದು ತಿಳಿದುಬಂದಿದೆ.
ಎಟಿಎಸ್, ಗುಪ್ತಚರ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಿಂದ ಬಂಧಿತವಾಗಿರುವ ಉಗ್ರರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ.
ಬಂಧಿತ ಇಬ್ಬರ ಶಂಕಿತ ಉಗ್ರರು ಬುರ್ದ್ವಾನ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಾಗಿದ್ದು, ಬಾಂಗ್ಲದೇಶದ ಜಮ್ಮತ್-ಉಲ್-ಮುಜಾಹಿದ್ದೀನ್ ಸಂಘಟನೆಯ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಪಶ್ಚಿಮಬಂಗಾಳ ಸೇರಿದಂತೆ ದೇಶದ ಹಲವಡೆ ದುಷ್ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿರುವುದಾಗಿ ತಿಳಿದುಬಂದಿದೆ.