ನವದೆಹಲಿ: ತಾನೇ ನೀರೆರೆದು ಪೋಷಿಸಿದ ಉಗ್ರರೇ ಈಗ ತನ್ನದೇ ರಕ್ತ ಹೀರಲು ಮುಂದಾಗಿದ್ದರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಂತಿಲ್ಲ. ಕಾಶ್ಮೀರ ಕಣಿವೆಯೊಳಗೆ ನುಸುಳಲು ಸಿದ್ಧವಾಗಿ ನಿಂತಿರುವ 50ರಿಂದ 60 ಉಗ್ರರಿಗೆ ನೆರವಾಗಲು ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆವರೆಗೆ ಮತ್ತೆ ಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದರಿಂದ ಹೊಸ ವರ್ಷದ ಆರಂಭದಲ್ಲೇ ಜಮ್ಮು ಮತ್ತು ಕಾಶ್ಮೀರ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಕ್‌ಸೇನೆಯು ಈ ದುಸ್ಸಾಹಸಕ್ಕೆ ಬಿಎಸ್‌ಎಫ್ ಈಗಾಗಲೇ ತಕ್ಕ ಉತ್ತರ ನೀಡಿದೆ. ಜತೆಗೆ, ಗಡಿಯಾಚೆಯ ಯಾವುದೇ ಅಪ್ರಚೋದಿತ ದಾಳಿಗೆ ಸರಿಯಾದ ಉತ್ತರ ನೀಡಿ ಎನ್ನುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಸೂಚನೆಯಿಂದ ಹುಮ್ಮಸ್ಸುಗೊಂಡಿರುವ ಬಿಎಸ್‌ಎಫ್, ಪಾಕ್ ಸೈನಿಕರಿಗೆ ಸರಿಯಾದ ಪಾಠ ಕಲಿಸುವ ಸಂದೇಶವನ್ನೂ ರವಾನಿಸಿದೆ.
ಒಂದು ವೇಳೆ ಪಾಕ್ ಸೈನಿಕರು ನಮ್ಮ ಮೇಲೆ ದಾಳಿ ನಡೆಸಿದರೆ ನಾವೂ ಅವರ ಮೇಲೆ ಪ್ರತಿ ದಾಳಿ ನಡೆಸುತ್ತೇವೆ. ಒಂದು ವೇಳೆ ಅವರು ನಮಗೆ ಹಾನಿ ಮಾಡಿದರೆ ದುಪ್ಪಟ್ಟು ಹಾನಿ ಎದುರಿಸಲು ಅವರು ಸಿದ್ಧರಾಗಬೇಕು ಎಂದು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ ರಾಕೇಶ್ ಶರ್ಮಾ ಎಚ್ಚರಿಸಿದ್ದಾರೆ.
ಎರಡು ದಿನಗಳಲ್ಲಿ ಮೂರನೇ ಬಾರಿ: ಪಾಕ್ ಸೇನೆ ಈರೀತಚಿ ಅಪ್ರಚೋದಿತ ದಾಳಿ ನಡೆಸುತ್ತಿರುವುದು ಎರಡು ದಿನಗಳಲ್ಲಿ ಇದು ಮೂರನೇ ಬಾರಿ. ಮಂಗಳವಾರದ ಅಪ್ರಚೋದಿತ ದಾಳಿಗೆ ಬಿಎಸ್‌ಎಫ್ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದು ಈ ವೇಳೆ, ಪಾಕ್‌ನ ನಾಲ್ವರು ಯೋಧರು ಮೃತ ಪಟ್ಟಿದ್ದಾರೆ. ಈ ವೇಳೆ ಬಿಎಸ್‌ಎಫ್ ನ ಯೋಧನೊಬ್ಬನೂ ಬಲಿಯಾಗಿದ್ದಾನೆ. ಇದರ ಬೆನ್ನಲ್ಲೇ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆವರೆಗೆ ಗಡಿಯಾಚೆಯಿಂದ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಯಲಿದೆ. ಸಾಂಬಾ ಸೆಕ್ಟರ್‌ನ 15 ಗಡೆ ಶಿಬಿರಗಳ ಮೇಲೆ ನಡೆದ ಈ ದಾಳಿಯಲ್ಲಿ ನಾಗರಿಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ಅವ್ರು ಹೊಸ ವರ್ಷ ಎನ್ನುವುದಕ್ಕೂ ನೋಡಲಿಲ್ಲ: ಪರಿಕ್ಕರ್
ಪಾಕ್ ಸೇನೆಯ ದುಸ್ಸಾಹಸಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಹೊಸ ವರ್ಷದಂದೂ ಸುಮ್ಮನೆ ಕೂರುವುದಿಲ್ಲ. ಹೊಸವರ್ಷ ಎನ್ನುವುದನ್ನೂ ನೋಡದೆ ಬುಧವಾರ ರಾತ್ರಿ 12.30ರ ವೇಳೆಗೆ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದೆ. ಇದು ಅದು ಯಾವುದೇ ಪಾಠ ಕಲಿತಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂದು ಪರಿಕ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಚೀನಾವನ್ನೂ ಗುರಿಯಾಗಿಟ್ಟುಕೊಂಡು ಮಾತನಾಡಿದ ಅವರು, ದೇಶದ ಉತ್ತರ ಗಡಿಯಲ್ಲಿರುವ ಇಬ್ಬರು ನೆರೆಹೊರೆಯವರು ನಮ್ಮ ಜತೆಗೆ ನೆಮ್ಮದಿಯಾಗಿರುವಂತೆ ಕಾಣುತ್ತಿಲ್ಲ ಎಂದೂ ಹೇಳಿದ್ದಾರೆ ಪರಿಕ್ಕರ್.
ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಬಾರದಿತ್ತು. ಒಂದು ವೇಳೆ ಪಾಕಿಸ್ತಾನದ ಗಡಿಯಲ್ಲಿ ಸವಾಲು ಹಾಕಿದರೆ ನಮ್ಮ ಯೋಧರು ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ.
ರಾಜನಾಥ್ ಸಿಂಗ್, ಗೃಹ ಸಚಿವ