ನವದೆಹಲಿ: ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಹೆಚ್ಚಿನ ಮಟ್ಟದಲ್ಲಿ ಬಾಂಬ್ ಸ್ಫೋಟ ಮಾಡದೇ ಇರುವುದಕ್ಕೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ವಿರುದ್ಧ ಅಸಮಾಧಾನಗೊಂಡಿ ಎಂದು ವರದಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಬಾಂಬ್ ಸ್ಫೋಟಿಸಿ, ಚುನಾವಣೆಯನ್ನು ಅಡ್ಡಿಪಡಿಸುವ ಯೋಜನೆಯನ್ನು ಪಾಕ್‌ನ ಐಎಸ್‌ಐ ರೂಪಿಸಿತ್ತು. ಇದಕ್ಕಾಗಿ ಎಲ್‌ಇಟಿ ಉಗ್ರ ಸಂಘಟನೆಗೆ ದಾಳಿ ನಡೆಸಲು ಸೂಚಿಸಿತ್ತು. ಆದರೆ, ಉಗ್ರ ಸಂಘಟನೆ ಬಾಂಬ್ ದಾಳಿ ನಡೆಸಿತಾದರೂ, ಐಎಸ್‌ಐ ನಿರೀಕ್ಷೆ ಮಟ್ಟದಲ್ಲಿ ದಾಳಿ ನಡೆಸುವಲ್ಲಿ ವಿಫಲವಾಗಿದೆ.
ಚುನಾವಣೆ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಿ 16 ಜನರು ಸಾವನ್ನಪ್ಪಿದ್ದರು. ಆದರೆ, ಈ ದುರಂತದಿಂದ ತೃಪ್ತಿಗೊಳ್ಳದ ಐಎಸ್‌ಐ, ಎಲ್‌ಇಟಿ ಉಗ್ರ ಸಂಘಟನೆ ನಿರೀಕ್ಷೆ ಮಟ್ಟದಲ್ಲಿ ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಿ ಚುನಾವಣೆಗೆ ಅಡ್ಡಿ ಪಡಿಸಿಲ್ಲ ಎಂದು ಎಲ್‌ಇಟಿ ವಿರುದ್ಧ ಅಸಮಾಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
25 ವರ್ಷಗಳ ನಂತರ ಜಮ್ಮ ಮತ್ತು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದ ಮತ ಚಲಾವಣೆಯಾಗಿತ್ತು. ಭಾರತದ ಭದ್ರತಾ ದಳದ ಮುಂಜಾಗ್ರತೆ ಕ್ರಮಗಳಿಂದಾಗಿ ಎಲ್‌ಇಟಿ ದಾಳಿಯನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಗಿದೆ.
ಭಾರತದ ಒಳ ನುಸುಳಲು ಉಗ್ರರರಿಗೆ ಪ್ರಚೋದನೆ ಪಾಕ್ ನೀಡುತ್ತಿದ್ದು, ಪಾಕ್ ನೆಲೆಯಲ್ಲಿ 150ಕ್ಕೂ ಹೆಚ್ಚು ಉಗ್ರರಿಗೆ ತರಬೇತಿ ನೀಡಲಾಗಿದ್ದು, ಈಗಾಗಲೇ ಈ ಉಗ್ರರು ಒಳನುಸುಳಲು ಭಾರತದ ಗಡಿಯಲ್ಲಿ ಹೊಂಚು ಹಾಕುತ್ತಿದ್ದಾರೆ. ಇದಲ್ಲದೇ, ಪಾಕ್ ಸೇನಾ ಪಡೆ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೇನಾ ಪಡೆ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ.