ಬೆಂಗಳೂರು: ಮಹಿಳೆಯಿಂದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಸಂಪತ್(32) ಎಂಬಾತನ ಮೇಲೆ ವಿಜಯನಗರ ಉಪ ವಿಭಾಗದ ಎಸಿಪಿ ಎಸ್.ಕೆ.ಉಮೇಶ್ ಗುಂಡು ಹಾರಿಸಿ ಬಂಧಿಸಿದ್ದಾರೆ.
ಅಗ್ರಹಾರ ದಾಸರಹಳ್ಳಿಯಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಅಗ್ರಹಾರ ದಾಸರಹಳ್ಳಿಯ 4ನೇ ಹಂತದ ನಿವಾಸಿ ಶಾಂತಮ್ಮ (53) ಅವರು ಬೆಳಿಗ್ಗೆ 9.30ರ ಸುಮಾರಿಗೆ ಮನೆ ಮುಂಭಾಗ ಕಸ ಗುಡಿಸುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಸಂಪತ್ ಹಾಗೂ ಮತ್ತೊಬ್ಬ ದುಷ್ಕರ್ಮಿ, ಶಾಂತಮ್ಮ ಅವರ ಸರ ಕಿತ್ತುಕೊಂಡಿದ್ದಾನೆ.
ಕೂಡಲೇ ಶಾಂತಮ್ಮ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಸರ ಮಾತ್ರ ಸಂಪತ್ ಕೈಗೆ ಸಿಕ್ಕಿದೆ. ಆ ಸಮಯದಲ್ಲಿ ಶಾಂತಮ್ಮ ಕೆಳಗೆ ಬಿದ್ದಿದ್ದಾರೆ. ಅವರು ಕಿರುಚಾಡುತ್ತಿದ್ದಂತೆ ಸಾರ್ವಜನಿಕರು ಹಾಗೂ ಸಮೀಪದಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಬೆನ್ನಟ್ಟಿ ಸಂಪತ್ನನ್ನು ಹಿಡಿದುಕೊಂಡಿದ್ದರು.
ನಂತರ ಆತ ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಬೆದರಿಸಿ ಓಡಿ ಹೋಗಿದ್ದ. ವೈರ್ಲೆಸ್ನಲ್ಲಿ ಮಾಹಿತಿ ಹರಡುತ್ತಿದ್ದಂತೆ ಸರಗಳ್ಳರ ನಿಯಂತ್ರಣಕ್ಕೆಂದೆ ಗಸ್ತಿನಲ್ಲಿದ್ದ ವಿಜಯನಗರ ಉಪ ವಿಭಾಗದ ಎಸಿಪಿ ಎಸ್.ಕೆ.ಉಮೇಶ್ ಸ್ಥಳಕ್ಕೆ ಧಾವಿಸಿದರು. ಆಗ, ಸರಗಳ್ಳ ಚೆನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿ ಸುತ್ತುವರಿದರು. ಬಂಧಿಸಲು ಬಂದ ಪೊಲೀಸ್ ಸಿಬ್ಬಂದಿ ಹಾಗೂ ಉಮೇಶ್ ಅವರ ಮೇಲೆ ಸರಗಳ್ಳ ಸಂಪತ್, ಚಾಕುವಿನಿಂದ ಹಲ್ಲೆಗೆ ಮುಂದಾದ.
ಆತ್ಮ ರಕ್ಷಣೆಗಾಗಿ ಉಮೇಶ್ ಸಂಪತ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಸ್ಥಳದಲ್ಲೇ ಕುಸಿದುಬಿದ್ದ ಆತನನ್ನು ಬಂಧಿಸಿದರು.
ಇನ್ನೊಬ್ಬ ಆರೋಪಿ ತಲೆಮರಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪತ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನಿಂದ 8 ಗ್ರಾಂ ತೂಕದ ಸರವನ್ನು ವಶಕ್ಕೆ ಪಡೆಯಲಾಗಿದೆ.
ಸಂಪತ್ ವಿರುದ್ಧ ಈ ಹಿಂದೆಯೂ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.