ಬೆಂಗಳೂರು: ಚುನಾವಣೆ ಅಖಾಡದಲ್ಲಿ ಮತ್ತೊಮ್ಮೆ ಸಾಮರ್ಥ್ಯ ಪ್ರದರ್ಶನಕ್ಕೆ ಇಳಿದಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಚುನಾವಣೆ ದೇಣಿಗೆ ಸಂಗ್ರಹಕ್ಕೆ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಉದ್ಯಮಿಗಳೊಂದಿಗೆ ದಿನ ಕಳೆದ ಅವರು ಬಿಜೆಪಿ ಹಾಗು ಕಾಂಗ್ರೆಸ್‌ನ್ನು ಸೋಲಿಸಲು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು. ಸುಮಾರು 200 ಉದ್ಯಮಿಗಳು, ಉದ್ಯ.ಮ ಸಂಸ್ಥೆಗಳ ಉದ್ಯೋಗಿಗಳೊಂದಿಗೆ ಮಧ್ಯಾಹ್ನದ ಭೋಜನ ಮಾಡಿದ ಆಪ್ ಮುಖ್ಯಸ್ಥ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ಪ್ರತಿ ಊಟದಿಂದ ರು.20 ಸಾವಿರ ಸಂಗ್ರಹಿಸಿದರು. ನಂತರ ಆಯ್ದ 25 ಆಪ್ ಕಾರ್ಯಕರ್ತರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ತಲಾ ರು. 500 ದೇಣಿಗೆ ಸಂಗ್ರಹಿಸಿದರು. ಸುಮಾರು ರು. 1 ಕೋಟಿ ದೇಣಿಗೆ ಸಂಗ್ರಹ ಗುರಿಯೊಂದಿಗೆ ಐಟಿ ರಾಜಧಾನಿಗೆ ಕೇಜ್ರಿವಾಲ್ ಆಗಮಿಸಿದ್ದರು. ಕಳೆದ ಲೋಕಸಭೆ ಚುನಾವಣೆ ವೇಳೆಯೂ ಇದೇ ರೀತಿ ಭೋಜನ ಕೂಟ ಏರ್ಪಡಿಸಿದ್ದರು.
ಕೇಂದ್ರ ಸರ್ಕಾರ ಉದ್ಯಮಿಗಳ ಕೈಗೊಂಬೆ: ಬಿಜೆಪಿ ಹಾಗು ಕಾಂಗ್ರೆಸ್‌ಗೆ ಬಂಡವಾಳಶಾಹಿಗಳು ಚುನಾವಣೆ ದೇಣಿಗೆ ನೀಡುತ್ತಾರೆ. ಚುನಾವಣೆ ಫಲಿತಾಂಶದ ಬಳಿಕ ಬಂಡವಾಳಶಾಹಿಗಳಿಗೆ ನೆರವಾಗುವಂತಹ ಕ್ರಮಗಳನ್ನು ಆ ಪಕ್ಷಗಳ ಸರ್ಕಾರ ಮಾಡುತ್ತವೆ. ಇದೇ ಕಾರಣದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳ ಕೈಗೊಂಬೆಯಂತೆ ಆಡುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿ ಫಲಿತಾಂಶದ ಬಳಿಕ ದೇಶದ ರಾಜಕೀಯ ವ್ಯವಸ್ಥೆ ಬದಲಾಗಲಿದೆ. ಜನರ ಮನಸ್ಸಿನಲ್ಲಿ ಆಮ್ ಆದ್ಮಿ ಪಕ್ಷ ಅಚ್ಚಾಗಿದೆ. ದೆಹಲಿಯಲ್ಲಿ ಆಪ್ ಗೆಲ್ಲುವುದು ಶತಃಸಿದ್ಧ . ಇದೇ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರು ಹತಾಶರಾಗಿ ಮಾತನಾಡುತ್ತಿದ್ದಾರೆ. ದೆಹಲಿಯಲ್ಲಿ ಚುನಾವಣೆ ರ್ಯಾಲಿ ವಿಫಲವಾದ್ದರಿಂದ ಬಿಜೆಪಿ ಮುಖಂಡರು ಕಂಗೆಟ್ಟಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷವು ಸ್ಪಚ್ಛ ಹಾಗೂ ಶ್ರಮದ ಹಣದಿಂದ ಚುನಾವಣೆ ಎದುರಿಸಿ ಆಡಳಿತ ನಡೆಸವು ಸಾಮಾನ್ಯರ ಮನೆ ಬಾಗಿಲಿಗೆ ಬರಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆರ್ಥಿಕವಾಗಿ ಸಬಲವಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ನಂತಹ ಪಕ್ಷಗಳನ್ನು ಎದುರಿಸಲು ಜನ ಹಾಗೂ ಧನ ಬಲ ಅನಿವಾರ್ಯ. ಜನರು ಉದಾರವಾಗಿ ದೇಣಿಗೆ ನೀಡಬೇಕು. ಜತೆಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಜೆ ಹಾಕಿ ಪ್ರಚಾರಕ್ಕೆ ಬರಬೇಕಿದೆ. ಈ ಮೂಲಕ ದೆಹಲಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನಗರದಲ್ಲೂ ಕ್ರೇಜಿ ಮಫ್ಲರ್!
ದೆಹಲಿಯ ಸಾಮಾನ್ಯ ಜನರನ್ನು ಬಿಂಬಿಸುವ ಸಲುವಾಗಿ ಮಫ್ಲರ್ ಧರಿಸಿ ಚುನಾವಣೆ ಪ್ರಚಾರ ನಡೆಸುವುದು ಕೇಜ್ರಿವಾಲ್ ಅವರ ಶೈಲಿ. ಆ ಮಫ್ಲರ್‌ನಿಂದಲೇ ಕೇಜ್ರಿವಾಲ್ ಗುರುತಿಸಲ್ಪಡುತ್ತಾರೆ. ಆದರೆ ದೆಹಲಿ ಚಳಿಗೆ ಅನಿವಾರ್ಯವಾಗಿರುವ ಮಫ್ಲರ್ ಪ್ರೀತಿಯನ್ನು ಬೆಂಗಳೂರಿನಲ್ಲೂ ಕೇಜ್ರಿವಾಲ್ ಬಿಡಲಿಲ್ಲ. ಪಕ್ಷದ ಕಾರ್ಯಕರ್ತರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಾಗ ಮಫ್ಲರ್ ಧರಿಸಿ ಫೋಟೊಗಳಿಗೆ ಪೋಸ್ ನೀಡಿದರು. ಆ ಫೋಟೋವನ್ನು ಅನಂತರ ಫೇಸ್‌ಬುಕ್‌ನಲ್ಲಿಯೂ ಆಪ್ ಮುಖ್ಯಸ್ಥ ಹಾಕಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಫ್ಲರ್ ಧರಿಸಿದ ಬಗ್ಗೆ ಭಾರಿ ಚರ್ಚೆಯೂ ಆಗಿದೆ.