ದೇಶ

ಹೈದರಾಬಾದ್ ಮೂಲದ ಶಂಕಿತ ಇಸಿಸ್ ಉಗ್ರನ ಬಂಧನ

Srinivasamurthy VN

ಹೈದರಾಬಾದ್: ಹೈದರಾಬಾದ್ ಮೂಲದ ಶಂಕಿತ ಇಸಿಸ್ ಉಗ್ರನನ್ನು ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

22 ವರ್ಷದ ಸಲ್ಮಾನ್ ಮೊಯಿನುದ್ದೀನ್ ಎಂಬಾತನನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಇಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಮೊಯಿನುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಶಂಕಿತ ಉಗ್ರ ಮೊಯಿನುದ್ದೀನ್ ಅಮೆರಿಕದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಈತ ಮೂಲತಃ ಹೈದರಾಬಾದಿನ ಆಸಿಫ್ ನಗರದ ನಿವಾಸಿ ಎಂದು ಹೇಳಲಾಗುತ್ತಿದೆ. ಈತನಿಗೆ ವಿವಾಹವಾಗಿದ್ದು, ಹ್ಯೂಸ್ಟನ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ದುಬೈನಲ್ಲಿ ಈತನಿಗೆ ನಿಕ್ಕಿ ಜೋಸೆಫ್ ಎಂಬ ಗೆಳತಿ ಇದ್ದು, ಆಕೆಯನ್ನು ಭೇಟಿ ಮಾಡಲು ದುಬೈಗೆ ತೆರಳಿದ್ದನು. ನಂತರ ಅಲ್ಲಿಂದ ಟರ್ಕಿ ಮಾರ್ಗವಾಗಿ ಸಿರಿಯಾಗೆ ತೆರಳುವವನಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿಕ್ಕಿ ಜೋಸೆಫ್ ಬ್ರಿಟೀಷ್ ಮೂಲದ ವೈದ್ಯರೊಬ್ಬರನ್ನು ವಿವಾಹವಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಮತಾಂತರದ ಬಳಿಕ ತಮ್ಮ ಹೆಸರನ್ನು ಆಯೇಷಾ ಎಂದು ಬದಲಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

SCROLL FOR NEXT