ದೇಶ

ವಾಯುಸೇನೆಗೆ 'ತೇಜಸ್‌' ಸೇರ್ಪಡೆ

Srinivasamurthy VN

ಬೆಂಗಳೂರು: ದೇಶೀನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ 'ತೇಜಸ್‌' ಅನ್ನು ಶನಿವಾರ ವಿದ್ಯುಕ್ತವಾಗಿ ವಾಯುಸೇನೆಗೆ ಸೇರ್ಪಡೆಗೊಳಿಸಲಾಯಿತು.

ವಾಯು ಸೇನೆಯ 32 ವರ್ಷಗಳ ಸತತ ಪರಿಶ್ರಮಕ್ಕೆ ಮೊದಲ ಯಶಸ್ಸು ದೊರೆತಿದ್ದು, ದೇಶೀ ನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ 'ತೇಜಸ್‌' ಇಂದು ಭಾರತೀಯ ಸೇನೆಯನ್ನು ಸೇರಿಕೊಂಡಿದೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತೇಜಸ್ ವಿಮಾನವನ್ನು ವಿದ್ಯುಕ್ತವಾಗಿ ವಾಯು ಸೇನೆ ಸೇರಿಸಲಾಯಿತು. ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ತೇಜಸ್ ಯುದ್ಧ ವಿಮಾನವನ್ನು ವಾಯು ಸೇನೆಗೆ ಸೇರ್ಪಡೆಗೊಳಿಸಿದರು. ಕಾರ್ಯಕ್ರಮದಲ್ಲಿ ವಾಯು ಸೇನೆಯ ಮುಖ್ಯಸ್ಥ ಅನೂಪ್ ರಹಾ ಅವರು ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.

ತೇಜಸ್ ಅನ್ನು ಎಚ್‌ಎಎಲ್‌ಸಂಸ್ಥೆ ಮತ್ತು ರಕ್ಷಣಾ ಉತ್ಪಾದನಾ ಮತ್ತು ಸಂಶೋಧನಾ ಸಂಸ್ಥೆಗಳಾದ ಎಚ್‌ಎಲ್, ಡಿಆರ್‌ಡಿಒ ಮತ್ತು ಆರ್‌ಡಿಇ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿದೆ. ತೇಜಸ್ ಯುದ್ಧ ವಿಮಾನವು ಈ ವರೆಗೂ ಸುಮಾರು 1800 ಗಂಟೆಗಳ ಕಾಲ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದ್ದು, ವಿಜ್ಞಾನಿಗಳ ಎಲ್ಲ ರೀತಿಯ ಪ್ರಾಥಮಿಕ ಪರೀಕ್ಷೆಗಳಲ್ಲಿ ಯಶಸ್ಸುಕಂಡಿದೆ. ಹೀಗಾಗಿ ಇಂದು ತೇಜಸ್ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಾಗಿದೆ.

2001ರ ಜನವರಿ 4ರಂದು ಪ್ರಥಮ ಬಾರಿಗೆ ತೇಜಸ್ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟವನ್ನು ನಡೆಸಲಾಗಿತ್ತು. ಬಳಿಕ ಸುಮಾರು 1500ಕ್ಕೂ ಹೆಚ್ಚು ಹಂತಗಳಲ್ಲಿ ತೇಜಸ್ ಪರೀಕ್ಷೆಗೊಳಪಟ್ಟಿದೆ. ಮೀರಜ್ 2000 ಜೆಟ್ ವಿಮಾನಕ್ಕಿಂತಲೂ ತೇಜಸ್ ವಿಮಾನದ ಹಾರಾಟ ಸುಲಭವಾಗಿದೆ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗಷ್ಟೇ ತೇಜಸ್‌ಗೆ ರಾಡಾರ್ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಈ ಅತ್ಯಾಧುನಿಕ ಲಘು ಯುದ್ಧವಿಮಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೇಜಸ್ ಎಂದು ಹೆಸರು ಕೊಟ್ಟಿದ್ದರು.

ಪ್ರಸ್ತುತ ಭಾರತೀಯ ವಾಯುಸೇನೆಗೆ 20 ತೇಜಸ್ ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಭವಿಷ್ಯದಲ್ಲಿ ಈ ಸಂಖ್ಯೆಯನ್ನು 80ಕ್ಕೆ ಏರಿಕೆ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ವಾಯುದಳವಷ್ಟೇ ಅಲ್ಲದೇ ನೌಕಾದಳ ಕೂಡ 50 ತೇಜಸ್ ಯುದ್ಧ ವಿಮಾನಕ್ಕೆ ಬೇಡಿಕೆ ಇಟ್ಟಿದ್ದು, ಡಿಸೆಂಬರ್ ಅಂತ್ಯದ ವೇಳೆ 4 ತೇಜಸ್ ಯುದ್ಧ ವಿಮಾನವನ್ನು ನೌಕಾದಳಕ್ಕೆ ನೀಡುವ ಸಾಧ್ಯತೆ ಇದೆ.

ಒಂದು ತೇಜಸ್ ಲಘು ಯುದ್ಧ ವಿಮಾನ ನಿರ್ಮಾಣಕ್ಕೆ ಸುಮಾರು 200 ಕೋಟಿ ಖರ್ಚಾಗಲಿದ್ದು, ಶೇ.75ರಷ್ಟು ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಉಳಿದ ಶೇ.25ರಷ್ಟು ಬಿಡಿಭಾಗಗಳನ್ನು ಮಾತ್ರ ವಿದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

SCROLL FOR NEXT