ಬೆಂಗಳೂರು: ಶೌಚಾಲಯ ಕಳವಾಗಿದ್ದರೆ 180042585555 ಗೆ ಕರೆ ಮಾಡಿ ದೂರು ನೀಡಿ!
ಶೌಚಾಲಯ ನಿರ್ಮಾಣದಲ್ಲಿ ಅಕ್ರಮವಾಗಿದೆ, ಸರ್ಕಾರ ಹೇಳಿಕೊಂಡ ಸಂಖ್ಯೆಯಲ್ಲಿ ಶೌಚಾಲಯ ನಿರ್ಮಾಣವಾಗಿಲ್ಲ ಎಂಬ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್, ಶೌಚಾಲಯ ನಿರ್ಮಾಣ ಅಕ್ರಮಕ್ಕೆ ಸಂಬಂಧಿಸಿ ಈ ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ದೂರು ನೀಡಬಹುದು. ಒಂದೊಮ್ಮೆ ಸರ್ಕಾರ ನೀಡಿರುವ ಸಂಖ್ಯೆಗಿಂತ ಒಂದು ಶೌಚಾಲಯ ಕಡಿಮೆಯಿದ್ದರೂ ಶೆಟ್ಟರ್ ಹೇಳಿದಂತೆ ಕೇಳುವೆ ಎಂದು ಪಾಟೀಲ್ ಸವಾಲೆಸೆದರು.
ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿ ಸಾರ್ವಜನಿಕ ಲೆಕ್ಕಪರಿಶೋಧನೆಗೆ ಸರ್ಕಾರ ಸಿದ್ಧವಿದೆ. ಸರ್ಕಾರ ನೀಡಿರುವ 3.57 ಲಕ್ಷದಲ್ಲಿ ಪ್ರತಿ ಸಂಖ್ಯೆಗೂ ಬದ್ಧವಿದೆ. ಸಂದೇಹವಿದ್ದರೆ ದಾಖಲೆ ಸಮೇತ ಮಾಹಿತಿ ನೀಡಲಿ.
ಇಲ್ಲವಾದಲ್ಲಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಲಿ. ಅವೆಲ್ಲದಕ್ಕಿಂತ ಹೆಚ್ಚಾಗಿ ಯಾರಿಗೆ ಸಂದೇಹ ಬಂದರೂ ಕೂಡಲೇ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಜ.30ರ ನಂತರ ದೂರು ನೀಡಲು ಅವಕಾಶವಿದೆ ಎಂದು ವಿಧಾನಸೌಧದಲ್ಲಿ ಶುಕ್ರವಾರ ಪಾಟೀಲ್ ತಿಳಿಸಿದ್ದಾರೆ.
ಎಲ್ಲ ಶೌಚಾಲಯಗಳನ್ನೂ ಸ್ಥಳೀಯ ಸಂಸ್ಥೆಗಳೇ ನಿರ್ಮಿಸಿದ್ದು, ರಾಜ್ಯಕ್ಕೆ ನಂ.1 ಸ್ಥಾನ ಸಿಕ್ಕಿದೆ. ಎಚ್.ಕೆ.ಪಾಟೀಲ್‌ಗೆ ಯಾವುದೇ ಪ್ರಶಂಸೆ ನೀಡುವ ಅಗತ್ಯವೂ ಇಲ್ಲ. ಆದರೆ ಈ ಆಂದೋಲನವನ್ನು ಯಶಸ್ವಿಗೊಳಿಸುತ್ತಿರುವ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಶಹಬ್ಬಾಸ್ ಹೇಳುವ ಕೆಲಸವನ್ನಾದರೂ ಶೆಟ್ಟರ್ ಮಾಡಲಿ. ಬದಲಾಗಿ ರಾಜಕೀಯ ಬಣ್ಣ ಲೇಪಿಸುವುದು ಹೇಸಿಗೆ ತರಿಸುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಹಣ ಕೊಡಿ ಎನ್ನುವುದರಲ್ಲಿ ತಪ್ಪೇನಿದೆ?
ರಾಜ್ಯದ ಪಾಲಿನ ಹಣ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರೆ ಹೊಟ್ಟೆಗೆ ಖಾರ ಹಾಕಿ ಕಲಸಿಕೊಂಡವರಂತೆ ಪ್ರಹ್ಲಾದ್ ಜೋಶಿ ವರ್ತಿಸುತ್ತಿದ್ದಾರೆ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕೇವಲ 927.89 ಕೋಟಿ ಹಣವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 3151 ಕೋಟಿ ಬೇಡಿಕೆ ಇರಿಸಿದೆ. ತಾಕತ್ತಿದ್ದರೆ ಈ ಸಂಖ್ಯೆ ತಪ್ಪೆಂದು ಸಾಬೀತುಪಡಿಸಲಿ. ರಾಜ್ಯದ ಸಂಸದರಾಗಿ ರಾಜ್ಯದ ಪಾಲಿನ ಹಣ ತರುವಲ್ಲಿ ನೆರವಾಗುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನೂ ಸಿದ್ಧ ಎಂದು ಪಾಟೀಲ್ ಸವಾಲೆಸೆದಿದ್ದಾರೆ.