ದೇಶ

'ಎಂಎಸ್‌ಜಿ' ಗೆ ಪಂಜಾಬ್ ಸರ್ಕಾರದಿಂದ ನಿಷೇಧ

Srinivasamurthy VN

ಚಂಡೀಗಢ: ದೇರಾ ಸಚ್ಛಾ ಸೌಧ ಸಂಸ್ಥೆ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಅವರ ವಿವಾದಿತ 'ಮೆಸ್ಸೆಂಜರ್ ಆಫ್ ಗಾಡ್‌' ಚಿತ್ರವು ಪಂಜಾಬ್ ಸರ್ಕಾರದಿಂದ ನಿಷೇಧಕ್ಕೊಳಗಾಗಿದೆ.

ಚಿತ್ರದಲ್ಲಿ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಚಿತ್ರ ತೆರೆಗೆ ಪಂಜಾಬ್ ಸರ್ಕಾರ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ 'ಮೆಸ್ಸೆಂಜರ್ ಆಫ್ ಗಾಡ್‌' ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪಂಜಾಬ್‌ನ ಪ್ರಮುಖ ರಾಜಕೀಯ ಪಕ್ಷಗಳಾದ ಶಿರೋಮಣಿ ಅಕಾಲಿದಳ, ಐಎನ್‌ಎಲ್‌ಡಿ ಮತ್ತು ಸಿಖ್ ಸಂಘಟನೆಗಳು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಚಿತ್ರ ಪ್ರದರ್ಶನಕ್ಕೆ ಈ ಕೂಡಲೇ ಪಂಜಾಬ್ ಸರ್ಕಾರ ತಡೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದೇ ರೀತಿ ಹರ್ಯಾಣ ಮತ್ತು ದೆಹಲಿಯಲ್ಲಿಯೂ ಸಿಖ್ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಹರ್ಯಾಣದ ಹಿಸ್ಸಾರ್ ಮತ್ತು ಸಿರ್ಸಾದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನು ದೆಹಲಿ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸುತ್ತಿರುವ ಸಿಖ್ ಪರ ಸಂಘಟನೆಗಳು ಯಾವುದೇ ಕಾರಣಕ್ಕೂ ಚಿತ್ರ ಪ್ರದರ್ಶನಕ್ಕೆ ಬಿಡುವುದಿಲ್ಲ ಎಂದು ಹೇಳಿವೆ. ಹೀಗಾಗಿ ಪ್ರಸ್ತುತ ವಿವಾದಿತ 'ಮೆಸ್ಸೆಂಜರ್ ಆಫ್ ಗಾಡ್‌' ಚಿತ್ರ ಪ್ರದರ್ಶನಕ್ಕೆ ಪಂಜಾಬ್ ಸರ್ಕಾರ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ.

ಸೆನ್ಸಾರ್ ಮಂಡಳಿಯ ಮತ್ತೆ 9 ಸದಸ್ಯರ ರಾಜಿನಾಮೆ
ಇನ್ನು ಸೆನ್ಸಾರ್ ಮಂಡಳಿಯಿಂದ ತಿರಸ್ಕೃತಗೊಂಡಿದ್ದ ಎಂಎಸ್‌ಜಿ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಆಕ್ರೋಶಗೊಂಡಿದ್ದ ಮಂಡಳಿಯ ಮುಖ್ಯಸ್ಥೆ ಲೀಲಾ ಸ್ಯಾಮ್ಸನ್ ಅವರು ನಿನ್ನೆ ರಾಜಿನಾಮೆ ನೀಡಿದ್ದರು. ಅವರ ಹಿಂದೆಯೇ ಮತ್ತೋರ್ವ ಸದಸ್ಯೆ ಇರಾ ಭಾಸ್ಕರ್ ಅವರು ಕೂಡ ರಾಜಿನಾಮೆ ನೀಡಿದ್ದರು. ಇದೀಗ ಮತ್ತೆ ಮಂಡಳಿಯ 9 ಮಂದಿ ಸದಸ್ಯರು ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT