ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಂದ ಹಣ ಪಡೆದು ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಚುನಾವಣಾ ಆಯೋಗ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಭಾನುವಾರ ನಿನ್ನೆ ದೆಹಲಿಯ ಉತ್ತಮ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕೇಜ್ರಿವಾಲ್ ಅವರು, 'ನೀವು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಣವನ್ನು ಪಡೆಯಿರಿ. ಆದರೆ ಮತವನ್ನು ಮಾತ್ರ ಆಮ್ ಆದ್ಮಿ ಪಕ್ಷಕ್ಕೆ ಹಾಕಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಕಾಂಗ್ರೆಸ್ ದೂರು ಸ್ವೀಕರಿಸಿದ್ದ ಚುನಾವಣಾ ಆಯೋಗ ಇಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದು, ಗುರುವಾರದೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದೆ.