ಬೆಂಗಳೂರು: ದೇಶ ಭಕ್ತಿ ಮತ್ತು ಪ್ರಾಮಾಣಿಕತೆ ಅವಿದ್ಯಾವಂತರಲ್ಲಿಯೇ ಹೆಚ್ಚು ಕಾಣಿಸುತ್ತಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದ್ದಾರೆ.
ದೇಶದಲ್ಲಿ ವಿದ್ಯಾವಂತರಿಂದ ನಿರೀಕ್ಷಿತ ಅಭಿವೃದ್ಧಯಾಗಿಲ್ಲ. ಆದ್ದರಿಂದ ಅವರಿಂದ ಏನನ್ನೂ ನಿರೀಕ್ಷಿಸಲು ಆಗುತ್ತಿಲ್ಲ. ಅವಿದ್ಯಾವಂತರೇ ಹೆಚ್ಚು ಕ್ರಿಯಾಶೀಲರಾಗಿದ್ದು, ಅವರಲ್ಲಿ ಪ್ರಾಮಾಣಿಕತೆ ಹಾಗೂ ದೇಶ ಪ್ರೇಮ ಹೆಚ್ಚಿದೆ ಎಂದುಅವರು ಸೋಮವಾರ ಅಂಚೆ ಇಲಾಖೆ ದಕ್ಷಿಣ ಭಾರತ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಅಂಗವಾಗಿ ಏರ್ಪಡಿಸಿದ್ದ ಸ್ವಚ್ಛತಾ ದಿನಾಚರಣೆಯಲ್ಲಿ ಮಾತನಾಡಿದರು.
ದೇಶ ಅಭಿವೃದ್ಧಿಗೆ ಹಣಕ್ಕಿಂತಲೂ ಉತ್ತಮ ವ್ಯಕ್ತಿತ್ವ ಹಾಗೂ ಸೇವೆ ಮಾಡುವ ಗುಣವಿರಬೇಕು. ಆಕರ್ಷಕ ಉಡುಪುಗಳನ್ನು ಧರಿಸಿದ ಮಾತ್ರಕ್ಕೆ ಅವರು ದೊಡ್ಡ ವ್ಯಕ್ತಿತ್ವದವರಾಗುವುದಿಲ್ಲ. ದೇಶಕ್ಕೆ ಕಿಂಚಿತ್ ಸೇವೆ ಸಲ್ಲಿಸುವ ಉತ್ತಮ ಗುಣಗಳನ್ನೂ ರೂಢಿಸಿಕೊಳ್ಳಬೇಕು. ಇದಕ್ಕೆ ಮಹಾತ್ಮಗಾಂಧಿ ಅವರೇ ಉತ್ತಮ ನಿದರ್ಶನ. ಅವರು ಉತ್ತಮ ಉಡುಗೆಗಳಿಂದ ಜನರನ್ನು ಆಕರ್ಷಿಸಲಿಲ್ಲ. ಬದಲಾಗಿ ಲಂಗೋಟಿ ಹಾಕಿಕೊಂಡು ಹೋರಾಡಿದರು. ದೇಶಭಕ್ತಿ, ಪ್ರಾಮಾಣಿಕತೆ ಇದ್ದರೆ ಸಾಮಾನ್ಯನೂ ದೇಶವನ್ನು ಆಳುವಂತೆ ಮಾಡಬಹುದು ಎಂದರು.
ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಶತಮಾನೋತ್ಸವ ಅಂಗಾವಾಗಿ ಹೊರತಂದಿರುವ ಅಂಚೆ ಚೀಟಿ ಹಾಗೂ ಅಂಚೆ ಲಕೋಟೆ ಹೊರತಂದಿರುವುದು ಸಂತಸದ ವಿಚಾರ. ಆದರೆ ಗಾಂಧೀಜಿ ಭಾವ ಚಿತ್ರವಿರುವ ಅಂಚೆ ಚೀಟಿ ಮತ್ತು ಲಕೋಟೆಯಲ್ಲಿ ಮೊಹರು ಹಾಕುವಾಗ ಮುಖದ ಮೇಲೆ ಬೀಳದಂತೆ ಎಚ್ಚರವಹಿಸಬೇಕು. ಆ ಮೂಲಕ ಅವರ ಆದರ್ಶಗಳನ್ನು ಗೌರವಿಸಬೇಕು.
ಗಾಂಧೀಜಿಯ ಸ್ವಚ್ಛತಾ ಸಂದೇಶವೆಂದರೆ ಮನಸ್ಸಿನ ಕಲ್ಮಷಗಳನ್ನೂ ತೆಗೆಯಬೇಕು ಎಂಬುದು. ಆಗ ಮಾತ್ರ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಮನಸ್ಸಿನಲ್ಲಿ ಕಲ್ಮಷಗಳನ್ನಿಟ್ಟುಕೊಂಡು ಏನೇ ಮಾಡಿದರೂ ವ್ಯರ್ಥವೆಂದರು.
ಇಲಾಖೆ ಪ್ರಧಾನ ಮುಖ್ಯ ಅಂಚೆ ಅಧಿಕಾರಿ ಎಂ.ಎಸ್.ರಾಮಾನುಜನ್, ಕರ್ನಾಫೆಕ್ಸ್ ಪ್ರದರ್ಶನದ ಅಧ್ಯಕ್ಷೆ ಡಾ.ಸೀತಾ ಭತೇಜ, ಎಫ್ ಕೆಸಿಸಿಐ ಅಧ್ಯಕ್ಷ ಎಸ್.ಸಂಪತ್‌ರಾಮನ್, ಅಲಹಾಬಾದ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಪಿ.ರಮಣಮೂರ್ತಿ ಮಾತನಾಡಿದರು.
ಖ್ಯಾತ ಅಂಚೆ ಚೀಟಿ ಸಂಗ್ರಹಕಾರ ಪ್ರದೀಪ್ ಜೈನ್, ಡೇನಿಯಲ್ ಮಾಂಟೇರಿಯೊ, ಡಾ.ಅಂಥಣಿ, ಮಹಾಲಿಂಗೇಶ್ವರ್ ಮತ್ತು ಡಾ.ಆರ್.ಜಿ.ಸಂಗೋರಾಮ್ ಅವರು ಅತ್ಯಮೂಲ್ಯ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಯಿತು. ಪ್ರದರ್ಶನದಲ್ಲಿ ವಿಚೇತರಲಾದ ಚೈತನ್ಯ ದೇವಿ, ರಾಧಕೃಷ್ಣ, ಮಹಮ್ಮದ್ ಮುಷರಫ್ ಆಳಿ, ಜೈಯಪ್ರಕಾಶ ಸಾರ್ಡ, ವೆರ್ನೋನ್ ಪೌಲ್, ಸಾನ್ವಿ ಸುರೇಶ್ ಸೇರಿದಂತೆ 10 ಪ್ರದರ್ಶಕರಿಗೆ ಪ್ರಶಸ್ತಿ ನೀಡಲಾಯಿತು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.