ಕಾನ್ಪುರ : ಗಡಿ ವಿವಾದ ಸೇರಿದಂತೆ ಚೀನಾ ಜತೆಗಿನ ಎಲ್ಲಾ ತಕರಾರುಗಳನ್ನು ಪರಿಹರಿಸಲು ಭಾರತ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದು, ಮಾತುಕತೆಗೆ ಚೀನಾ ಮುಂದಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತ-ಚೀನ ಗಡಿಯಲ್ಲಿ ಉಭಯ ದೇಶಗಳ ನಡುವೆ ಸೂಕ್ಷ್ಮ ಭಿನ್ನಾಭಿಪ್ರಾಯಗಳಿವೆ. ಉಭಯ ದೇಶಗಳ ನಡುವಣ ಗಡಿ ವಿವಾದವನ್ನು ಬಗೆಹರಿಸಲು ಭಾರತ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಿದೆ. ಚೀನದೊಂದಿಗಿನ ಎಲ್ಲಾ ತಕರಾರುಗಳನ್ನೂ ಸೌಹಾರ್ದಯುತವಾಗಿ ಬಗೆಹರಿಸಲು ಭಾರತ ಉತ್ಸುಕವಾಗಿದ್ದು ಚೀನ ಮಾತುಕತೆಗೆ ಮುಂದಾಗಬೇಕು ಎಂದರು. ಗಡಿ ಸುರಕ್ಷಾ ಪಡೆಯಾಗಿರುವ ಐಟಿಬಿಪಿಯ ಬೆಟಾಲಿಯನ್ ಕ್ಯಾಂಪ್‌ನ್ನು ಉದ್ಘಾಟಿಸಿ ರಾಜನಾಥ್ ಸಿಂಗ್ ಮಾತನಾಡಿದರು.
ತನ್ನ ಭೂಪ್ರದೇಶವನ್ನು ವಿಸ್ತರಿಸಿಕೊಳ್ಳುವ ಯಾವುದೇ ಉದ್ದೇಶವನ್ನು ಭಾರತ ಹೊಂದಿಲ್ಲ. ಆದರೆ ಭಾರತದ ಭೂಭಾಗವನ್ನು ಆಕ್ರಮಿಸಲು ಇತರರಿಗೆ ಅವಕಾಶವನ್ನು ನೀಡಲಾಗದು. ಭಾರತ ಈ ಹಿಂದಿನಿಂದಲೂ ಶಾಂತಿಯನ್ನು ಪ್ರತಿಪಾದಿಸುತ್ತಾ ಬಂದಿದ್ದು ಯಾವ ದೇಶದ ಮೇಲೂ ಆಕ್ರಮಣ ನಡೆಸಿಲ್ಲ. ಚೀನಾ ಈ ವಿಚಾರವನ್ನು ಮನಗಂಡು ಎಲ್ಲಾ ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಭಾರತದ ಪ್ರಾಮಾಣಿಕ ಪ್ರಯತ್ನದಲ್ಲಿ ಕೈಜೋಡಿಸಬೇಕು ಎಂದಿದ್ದಾರೆ.