ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಮುಖಾಮುಖಿ ಸ್ಪರ್ಧೆ ಏರ್ಪಡಲಿದೆ. ಹೀಗಾಗಿ ಎಎಪಿ ವಿರುದ್ಧ ಬಿಜೆಪಿ ರಣತಂತ್ರ ಹೆಣೆದಿದೆ.
ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ. ಆದರೆ ಈ ಬಾರಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಇಲ್ಲದೆ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಅಲ್ಲದೆ ತೀವ್ರ ಪ್ರತಿಸ್ಪರ್ಧಿಯಾಗಿರುವ ಎಎಪಿ ವಿರುದ್ಧ ರಣತಂತ್ರ ರಚಿಸಿರುವ ಬಿಜೆಪಿ, ಆಮ್ ಆದ್ಮಿ ಪಕ್ಷ(ಎಎಪಿ) ಸಂಸ್ಥಾಪಕ, ಮಾಜಿ ದೆಹಲಿ ಮುಖ್ಯಮಂತ್ರಿಯನ್ನು ಅರವಿಂದ್ ಕೇಜ್ರಿವಾಲ್‌ರ ತಪ್ಪುಗಳನ್ನು ಎತ್ತಿ ತೊರಿಸಲು ಮುಂದಾಗಿದೆ. ಅದರಂತೆ ಕೇಜ್ರಿವಾಲ್‌ಗೆ ದಿನಕ್ಕೆ ಐದು ಪ್ರಶ್ನೆಯಂತೆ ಫೆಬ್ರವರಿ 6ರವರೆಗೂ ಪ್ರಶ್ನೆಗಳನ್ನು ಕೇಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಿದ್ಧವಾಗಿದೆ.
ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಪುಟ ಸಚಿವರು ಸೇರಿದಂತೆ ಪಕ್ಷದ ಹಿರಿಯ ಸದಸ್ಯರ ಸಭೆ ಕರೆದಿದ್ದರು. ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಈ ಬಾರಿ ಬಿಜೆಪಿ ಪಕ್ಷ ಚುನಾವಣಾ ಪ್ರಣಾಳಿಕೆ ಮೂಲಕ ಮತಯಾಚಿಸುವುದಿಲ್ಲ. ಆದರೆ ಚುನಾವಣೆಯನ್ನು ಗೆಲ್ಲುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರು ಸೇರಿದಂತೆ ಬಿಜೆಪಿ ಪಕ್ಷದ 120 ಸಂಸದರು ದೆಹಲಿಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸುತ್ತಾರೆ ಎಂದು ಅನಂತ್ ಕುಮಾರ್ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಬಹುಮತದೊಂದಿಗೆ ಪಕ್ಷ ಗೆಲುವು ಸಾಧಿಸಲಿದೆ ಎಂದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಹಿರಿಯ ಮುಖಂಡ ರಾಜೀವ್ ಪ್ರತಾಪ್ ರೂಡಿ ಅವರು ಐದು ಪ್ರಶ್ನೆಗಳನ್ನು ಕೇಜ್ರಿವಾಲ್ ಮುಂದಿಟ್ಟಿದ್ದಾರೆ.
ಕೇಜ್ರಿವಾಲ್‌ಗೆ ಕೇಳಲಾದ ಐದು ಪ್ರಶ್ನೆಗಳು
1. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲ ಪಡೆಯುವುದಿಲ್ಲ ಎಂದಿದ್ದರು. ಆದರೆ?
2. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್ ವಿರುದ್ಧ ತನಿಖೆಗೆ ಆದೇಶಿಸಿಲ್ಲ ಏಕೆ?
3. ಕೇಜ್ರಿವಾಲ್ ಮುಖ್ಯಮಂತ್ರಿ ಆದ ಬಳಿಕ ಝಡ್ ಪ್ಲಸ್ ಸೆಕ್ಯೂರಿಟಿ ತೆಗೆದುಕೊಂಡಿದ್ದೇಕೆ?
4. ಸಿಎಂ ಆಗಿ ಪದಗ್ರಹಣ ವೇಳೆ ಮೆಟ್ರೋದಲ್ಲಿ ಬಂದಿದ್ದ ಕೇಜ್ರಿವಾಲ್ ಬಳಿಕ ಸರ್ಕಾರಿ ಕಾರನ್ನು ಬಳಸಿದ್ದೇಕೆ?
5. ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುವುದು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಹೇಳಿದ್ದ ಕೇಜ್ರಿವಾಲ್ ಬಳಿಕ ಏತಕ್ಕಾಗಿ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದ್ದರು ಎಂಬ ಐದು ಪ್ರಶ್ನೆಗಳನ್ನು ಸದ್ಯಕ್ಕೆ ಕೇಜ್ರಿವಾಲ್‌ರ ಮುಂದಿಟ್ಟಿದೆ.