ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಭಿವೃದ್ಧಿ ವಾತಾವರಣೆ ನಿರ್ಮಾಣವಾಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತನ್ನಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.
ಫೆಬ್ರವರಿ 7 ರಂದು ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸೋನಿಯಾ, ಬಿಜೆಪಿ ಮತ್ತು ಎಎಪಿ ಪಕ್ಷಗಳು ತಾವು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ಎಂದರು.
ಇದೇ ವೇಳೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ರೈತ ವಿರೋಧಿಯಾಗಿದ್ದು, ಹಿಂದಿನ ಯುಪಿಎ ಸರ್ಕಾರ ರಚಿಸಿದ್ದ ಭೂಸ್ವಾಧೀನ ಕಾನೂನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ರೈತರು ತಮ್ಮ ಬೆಳೆಗಳಿಗೆ ಗೊಬ್ಬರ ಮತ್ತು ಬೀಜಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ. ನಾವು ದೇಶದ ಬಡವರ ಉದ್ಧಾರಕ್ಕಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವು. ಆದರೆ ಇಂದು ಮೋದಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದ ಬಡವರು ದುರ್ಬಲರಾಗುತ್ತಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನತೆ ತಮಗೆ ನೀಡಿದ್ದ ಮುಖ್ಯಮಂತ್ರಿ ಪದವಿಯನ್ನು ಸಕ್ರಿಯವಾಗಿ ನಿರ್ವಹಿಸದೆ ಕೇವಲ ಒಂದುವರೆ ತಿಂಗಳಲ್ಲೇ ಜವಾಬ್ದಾರಿಯಿಂದ ಹಿಂದೆ ಸರಿದಿದ್ದರು ಎಂದು ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಜನರು ಮತ್ತು ಸರ್ಕಾರಿ ನೌಕರರಿಗೆ ಉದ್ಯೋಗ ಖಾತರಿ ಕುರಿತಂತೆ ಪ್ರಬಲ ಕಾನೂನುಗಳನ್ನು ಮಾಡಿತ್ತು ಎಂದರು.