ದೇಶ

ಅಪಘಾತದ ವೇಳೆ ಕಾರು ಚಲಾಯಿಸಿದ್ದು ಹೇಮಮಾಲಿನಿ?

Rashmi Kasaragodu

ಮಥುರಾ: ಗುರುವಾರ ಅಪಘಾತ ಸಂಭವಿಸಿದ ವೇಳೆ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಮಾಲಿನಿಯವರ ಕಾರು ಚಲಾಯಿಸುತ್ತಿದ್ದರು ಆಕೆಯ ಕಾರು ಡ್ರೈವರ್ ಅಲ್ಲ, ಡ್ರೈವರ್ ಸೀಟಲ್ಲಿ ಇದ್ದದ್ದು ಹೇಮಮಾಲಿನಿಯೇ ಎಂಬ ಸುದ್ದಿ ಕೇಳಿ ಬರುತ್ತಿದೆ. ಕಾರು ಸಿಕ್ಕಾಪಟ್ಟೆ ವೇಗದಿಂದ ಕೂಡಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ವೇಗದಿಂದಾಗಿಯೇ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು 2 ವರುಷದ ಮಗು ಮೃತ ಪಟ್ಟಿತ್ತು.

ಕಾರು ಚಾಲನೆಯ ವೇಳೆ ಹೇಮಮಾಲಿನಿ ಮದ್ಯಸೇವನೆ ಮಾಡಿದ್ದರು ಎಂಬ ಆರೋಪಗಳೂ ಸಾಮಾಜಿಕ ತಾಣದಲ್ಲಿ ಕೇಳಲ್ಪಟ್ಟಿದೆ.

ನಿನ್ನೆ ಅಪಘಾತ ಸಂಭವಿಸಿದ ನಂತರ ಹೇಮಮಾಲಿನಿಯ ಹಣೆಗೆ ಗಾಯವಾಗಿ ರಕ್ತ ಸುರಿಯುತ್ತಿರುವ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದಾಗ್ಯೂ, ಹಿಂದಿನ ಸೀಟಿನಲ್ಲಿ ಕುಳಿತ ಹೇಮಮಾಲಿನಿಯ ಹಣೆಗೆ ಅಷ್ಟೊಂದು ಗಾಯವಾಗಲು ಏನು ಕಾರಣ? ಎಂಬ ಪ್ರಶ್ನೆ ಎದ್ದಿದ್ದು, ಸ್ಟೇರಿಂಗ್ ತಾಗಿಯೇ ಆಕೆಗೆ ಅಷ್ಟೊಂದು ಗಾಯಗಳಾಗಿವೆ ಎಂದು ಕೆಲವರು ವಾದಿಸಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿದಂತೆ ಡ್ರೈವರ್ ಮಹೇಶ್ ಠಾಕೂರ್ ಅವರನ್ನು ಪೊಲೀಸರು ಬಂಧಿಸಿದ್ದು, ಶುಕ್ರವಾರ ಸಂಜೆ ಆತನಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ.

ಅಪಘಾತ ಸಂಭವಿಸಿದ ಕೂಡಲೇ ಹೇಮಮಾಲಿನಿಯನ್ನು ಜೈಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇನ್ನುಳಿದ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ರೀತಿಯ ತಾರತಮ್ಯ ಮಾಡಿದ್ದು ಯಾಕೆ ಎಂಬ ಪ್ರಶ್ನೆಯನ್ನೂ ಜನ ಕೇಳುತ್ತಿದ್ದಾರೆ.

ಗುರುವಾರ ರಾತ್ರಿ 9 ಗಂಟೆಯ ವೇಳೆಯೆ ರಾಜಸ್ಥಾನದ ದಾಸೌ ಎಂಬಲ್ಲಿ ಹೇಮಮಾಲಿನಿ ಸಂಚರಿಸಿದ್ದ ಮೆರ್ಸಿಡೆಸ್ ಬೆನ್ಜ್ ಕಾರು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ 2 ವರ್ಷದ ಮಗು ಅಸುನೀಗಿತ್ತು.

SCROLL FOR NEXT