ಮದ್ಯಪ್ರದೇಶ: ದಿನಕಳೆದಂತೆಲ್ಲಾ ವ್ಯಾಪಂ ಹಗರಣದ ಸಂಬಂಧ ನಿಗೂಢವಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ನಾಲ್ಕು ತಿಂಗಳ ಹಿಂದೆ ವಿಶೇಷ ತನಿಖಾ ತಂಡದಿಂದ ವಿಚಾರಣೆಗೊಳಪಟ್ಟಿದ್ದ ಪೊಲೀಸ್ ಕಾನ್ ಸ್ಪೇಬಲ್ ಮಧ್ಯಪ್ರದೇಶದ ತಿಕಾಮ್ರಗ್ ಠೂರಿಸ್ಟ್ ಔಟ್ ಪೋಸ್ಟ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ರಮಾಕಾಂತ್ ಪಾಂಡೆ ಎಂಬ ಪೊಲೀಸ್ ಪೇದೆ ಕಳೆದ ನಾಲ್ಕು ತಿಂಗಳ ಹಿಂದೆ ಪ್ರಕರಣ ಸಂಬಂಧ ತನಿಖಾಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದ. ಪೊಲೀಸ್ ಕಾನ್ ಸ್ಟೇಬಲ್ ಸಾವಿಗೂ ವ್ಯಾಪಂ ಹಗರಣಕ್ಕೂ ಸಂಬಂಧವಿಲ್ಲ. ಆತ ಅತಿಯಾಗಿ ಕುಡಿಯುತ್ತಿದ್ದ ಮತ್ತು ತುಂಬಾ ಸಾಲ ಮಾಡಿದ್ದ. ಸಾಲದ ಖಿನ್ನತೆಯಿಂದ ಕುಡಿದ ಅಮಲಿನಲ್ಲಿ ಆತ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಿನ್ನೆಯಷ್ಟೇ ಮಹಿಳಾ ತರಬೇತಿ ಸಬ್ ಇನ್ಸ್ ಪೆಕ್ಟರ್ ಶವ ಸರೋವರದಲ್ಲಿ ಪತ್ತೆಯಾಗಿತ್ತು. ಈ ಘಟನೆ ನಡೆದ 24 ಗಂಟೆಯೊಳಗೆ ಪೊಲೀಸ್ ಕಾನ್ ಸ್ಟೇಬಲ್ ಸಾವು ಪ್ರಕರಣವನ್ನು ಮತ್ತಷ್ಟು ನಿಗೂಢಗೊಳಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ನಾಲ್ಕನೇ ಸಾವು ಇದಾಗಿದೆ.
ಶನಿವಾರ ಪತ್ರಕರ್ತ ಅಕ್ಷಯ್ ಸಿಂಗ್ ನಿಗೂಢವಾಗಿ ಸಾವನ್ನಪ್ಪಿದ್ದರು. ಅದಾದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಅರುಣ್ ಶರ್ಮಾ ದೆಹಲಿಯ ಹೋಟೆಲ್ ವೊಂದರಲ್ಲಿ ಸಾವನ್ನಪ್ಪಿದ್ದರು. ನಿನ್ನೆಯಷ್ಟೇ ಮಹಿಳಾ ಇನ್ಸ್ ಪೆಕ್ಟರ್ ಶವ ಸರೋವರದಲ್ಲಿ ಪತ್ತೆಯಾಗಿತ್ತು. ಇಂದು ಕಾನ್ ಸ್ಟೇಬಲ್ ಸೇರಿ, ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 48 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.