ದೇಶ

ಪ್ರಿಯಾಂಕಾ ಭೂಮಿ ಖರೀದಿ ಮಾಹಿತಿ ಬಹಿರಂಗ: ಆದೇಶ ತಡೆಹಿಡಿದ ಹೈ ಕೋರ್ಟ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಶಿಮ್ಲಾದಲ್ಲಿ ನಡೆಸಿದ ಭೂ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸದ್ಯಕ್ಕೆ ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕಾ ಖರೀದಿಸಿದ ಭೂಮಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿ ಆರ್ ಟಿಐ ಕಾರ್ಯಕರ್ತ ದೇವಶೀಶ್ ಭಟ್ಟಾಚಾರ್ಯ ಮಾಹಿತಿ ಕೇಳಿದ್ದರು. ಆದರೆ, ಈ ಸಂಬಂಧ ನಿಗದಿತ ಸಮಯದೊಳಗೆ ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾಗಿದ್ದರು. ಹೀಗಾಗಿ ಕಳೆದ ತಿಂಗಳಷ್ಟೇ ಪ್ರಿಯಾಂಕಾ ಭೂಮಿ ಖರೀದಿ ವ್ಯವಹಾರದ ಮಾಹಿತಿಯನ್ನು 10 ದಿನದೊಳಗೆ ನೀಡುವಂತೆ ಹಿಮಾಚಲ ಪ್ರದೇಶ ಮಾಹಿತಿ ಆಯೋಗವು ಸ್ಥಳೀಯಾಡಳಿತಕ್ಕೆ ಆದೇಶ ನೀಡಿತ್ತು.

ಇದೀಗ ಈ ಆದೇಶವನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದ್ದು, ಪ್ರಿಯಾಂಕಾ ಭೂಮಿ ಖರೀದಿ ಮಾಹಿತಿಯನ್ನು ಸದ್ಯ ಬಹಿರಂಗ ಪಡಿಸದಿರುವಂತೆ ಹೇಳಿದೆ.

ಪ್ರಿಯಾಂಕಾ ಭೂ ಆಸ್ತಿಗೆ ಸಂಬಂಧಿಸಿದ ಮಾಹಿತಿ ಕೋರಿ ದೇವಶೀಶ್ ಭಟ್ಟಾಚಾರ್ಯ ಜುಲೈ 2014 ರಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಿಯಾಂಕಾ ಸೋನಿಯಾ ಗಾಂಧಿಯ ಪುತ್ರಿಯಾದ್ದರಿಂದ ಆಸ್ತಿ ವಿವರ ನೀಡಿದರೆ ಅವರ ಭದ್ರತೆಗೆ ತೊಂದರೆಯುಂಟಾಗಬಹುದೆಂಬ ಕಾರಣ ನೀಡಿದ ಶಿಮ್ಲಾ ಜಿಲ್ಲಾಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದ್ದರು.

ಹಿಮಾಚಲ ಪ್ರದೇಶ ಬಹಳ ಚಿಕ್ಕ ರಾಜ್ಯವಾಗಿದೆ. ಶಿಮ್ಲಾದಲ್ಲಿರುವ ರಾಷ್ಟ್ರಪತಿ ಭವನಕ್ಕೆ ಸೇರಿದ ಜಮೀನಿನ ವಲಯದಲ್ಲಿ 2007 ಮತ್ತು 2012 ರಲ್ಲಿ ನಿಯಮ ಮೀರಿ ಭೂಮಿ ಖರೀದಿಸಿದ್ದು, ಇದಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರ ಕಾನೂನನ್ನು ಸಡಿಲಗೊಳಿಸಿ, ಪ್ರಿಯಾಂಕಾ ಗಾಂಧಿ ಅವರಿಗೆ ಭೂಮಿ ಕೊಳ್ಳಲು ಅವಕಾಶ ನೀಡಿದೆ. ಈ ಅವಕಾಶವನ್ನು ಪ್ರಿಯಾಂಕಾ ಗಾಂಧಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಮಾಹಿತಿ ನೀಡುವಂತೆ ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳೂ ಮಾಹಿತಿ ನೀಡಲು ನಿರಾಕರಿಸಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು.

SCROLL FOR NEXT