ನವದೆಹಲಿ: ನಿಗೂಢ ಸಾವುಗಳ ಮೂಲಕ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ವ್ಯಾಪಂ ಹಗರಣವನ್ನು ಸುಪ್ರೀಂ ಕೋರ್ಟ್ ಗುರುವಾರ ಸಿಬಿಐ ತನಿಖೆಗೆ ಒಪ್ಪಿಸಿದೆ. ಅಲ್ಲದೇ ಈ ಸಂಬಂಧ ಮಧ್ಯಪ್ರದೇಶ ರಾಜ್ಯಪಾಲ, ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಸೂಚಿಸಿ, ನೋಟಿಸ್ ಜಾರಿ ಮಾಡಿದೆ.
ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 2 ವರ್ಷದಲ್ಲಿ ಇದುವರಗೆ 48 ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಐದು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಇಂದು ಆ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ವಿಭಾಗೀಯ ಪೀಠ, ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗೂಢ ಸಾವಿನ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಈ ನಿಗೂಢ ಸಾವುಗಳ ಕುರಿತು ಸಿಬಿಐ ತನಿಖೆ ನಡೆಸಲಿದೆ.
ಇನ್ನು ಈ ಸಂಬಂಧ ಜಬಲ್‌ಪುರ್ ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇಲ್ಲಿ ವಿಚಾರಣೆ ನಡೆಯುವಾಗ ಅಲ್ಲಿ ಯಾವುದೇ ಆದೇಶ ನೀಡಬೇಡಿ ಎಂದು ಸೂಚಿಸಿದೆ.
ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ಪಕ್ಷ ಸೇರಿದಂತೆ ಇತರೆ ಪಕ್ಷಗಳು ಒತ್ತಡ ಹೇರಿದ್ದವು.