ಭೋಪಾಲ್: ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಒಳ್ಳೆಯ ದಿನಗಳನ್ನು(ಅಚ್ಚೆ ದೀನ್) ನೀಡುವುದಾಗಿ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಭರವಸೆ ನೀಡಿತ್ತು. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಈಗ ಉಲ್ಟಾ ಹೊಡೆದಿದ್ದು ಅಚ್ಚೆ ದೀನ್ ಬರಲು 25 ವರ್ಷ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಮಿತ್ ಷಾ, ಕೇವಲ 5 ವರ್ಷದ ಅವಧಿಯಲ್ಲಿ ಅಚ್ಚೆ ದೀನ್ ನೀಡಿ ಭಾರತವನ್ನು ವಿಶ್ವದ ನಂ.1 ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಳ್ಳೆಯ ದಿನಗಳೆಂಬುದು ಬ್ರಿಟೀಶ್ ಪೂರ್ವ ಆಡಳಿತವಿದ್ದ ಸಂದರ್ಭದಲ್ಲಿ ಭಾರತದ ಹೆಮ್ಮೆಯ ವಿಷಯವಾಗಿತ್ತು. 5 ವರ್ಷದ ಅಲ್ಪ ಅವಧಿಯಲ್ಲಿ ಅದನ್ನು ಮರಳಿ ತರಲು ಸಾಧ್ಯವಿಲ್ಲ. ಪಂಚಾಯತ್ ನಿಂದ ಸಂಸತ್ ವರೆಗೂ ಬಿಜೆಪಿ ಅಧಿಕಾರದಲ್ಲಿದ್ದರೆ ಮಾತ್ರ ಒಳ್ಳೆಯ ದಿನಗಳು ಬಂದು ಭಾರತ ವಿಶ್ವದ ನಂ.1 ದೇಶವಾಗಲು ಸಾಧ್ಯ ಎಂದು ಅಮಿತ್ ಷಾ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಹಣದುಬ್ಬರವನ್ನು ಕಡಿಮೆ ಮಾಡಲಿದೆ, ಗಡಿಗಳನ್ನು ಸುರಕ್ಷಿತವಾಗಿರಿಸಲಿದೆ, ಬಲಿಷ್ಠ ವಿದೇಶಾಂಗ ನೀತಿಗಳನ್ನು ರೂಪಿಸಲಿದೆ, ಅಲ್ಲದೇ ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸಲಿದೆ ಎಂದು ಅಮಿತ್ ಷಾ ಭರವಸೆ ನೀಡಿದ್ದಾರೆ.