ದೇಶ

'ಸ್ಕಿಲ್ ಇಂಡಿಯಾ'ಗೆ ಪ್ರಧಾನಿ ಚಾಲನೆ, 2022ರ ವೇಳೆಗೆ 40 ಕೋಟಿ ಯುವಕರಿಗೆ ತರಬೇತಿ

Lingaraj Badiger

ನವದೆಹಲಿ: ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ 'ಸ್ಕಿಲ್ ಇಂಡಿಯಾ' ಯೋಜನೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ಅಧಿಕೃತವಾಗಿ ಆರಂಭವಾಗಿದೆ.

ಯುವ ಜನತೆಯ ತರಬೇತಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕುಶಲ ವಿಕಾಸ ಯೋಜನೆ ಹಾಗೂ ಕೌಶಲ್ಯ ಸಾಲ ಯೋಜನೆ ಜಾರಿಗೆ ತಂದಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸ್ಕಿಲ್ ಇಂಡಿಯಾಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಇಂದು ಇಡೀ ವಿಶ್ವವೇ ಭಾರತವನ್ನು ಗೌರವದಿಂದ ನೋಡುತ್ತಿದೆ ಎಂದರು.

ಭಾರತ ಬಡತನದ ವಿರುದ್ಧದ ಹೋರಾಟದಲ್ಲಿ ಇಂದು ಮಹತ್ವಪೂರ್ಣ ಹೆಜ್ಜಿಯಿಟ್ಟಿದೆ. ಕೌಶಲ್ಯಾಭಿವೃದ್ಧಿಯ ಮೂಲಕ ಬಡತನದ ವಿರುದ್ಧ ಹೋರಾಟದಲ್ಲಿ ನಾವು ಗೆಲುವು ಸಾಧಿಸಬೇಕು. ಈ ಹೋರಾಟದಲ್ಲಿ ಪ್ರತಿ ಬಡ ಯುವಕನೂ ಒಬ್ಬ ಯೋಧನಿದ್ದಂತೆ ಎಂದು ಪ್ರಧಾನಿ ಹೇಳಿದರು.

ಯುವ ಜನತೆಯ ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದ್ದು, 2022ರ ವೇಳೆಗೆ 40.2 ಕೋಟಿ ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ -2015ರ ರಾಷ್ಟ್ರೀಯ ನೀತಿಯನ್ನು ಪ್ರಧಾನಿ ಬಿಡುಗಡೆ ಮಾಡಿದರು.

SCROLL FOR NEXT