ಮ್ಯಾಗಿ ನಿಷೇಧದ ಪ್ರಕರಣದಲ್ಲಿ ಉತ್ಪಾದಕ ಸಂಸ್ಥೆ ನೆಸ್ಲೆ ಅರ್ಜಿಯ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್, ಮದ್ಯ ಆರೋಗ್ಯಕ್ಕೆ ಹಾನಿಕರವಾಗಿರುವುದರಿಂದ ಅದನ್ನು ಮೊದಲು ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
"ನೀವು ಮೊದಲು ಮದ್ಯವನ್ನು ನಿಷೇಧಿಸಬೇಕು. ಇತ್ತೀಚಿಗೆ ಶಾಲಾಮಕ್ಕಳು ಕೂಡ ಮದ್ಯಪಾನ ಪ್ರಾರಂಭಿಸಿದ್ದಾರೆ. ಅದು ಆಹಾರ ವಿಭಾಗಕ್ಕೆ ಸೇರುತ್ತದೆ ಮತ್ತು ಆರೋಗ್ಯಕ್ಕೆ ಹಾನಿಕರ. ಸಿಗರೆಟ್ ಆಹಾರ ಉತ್ಪನ್ನಗಳ ವಿಭಾಗಕ್ಕೆ ಸೇರುವುದಿಲ್ಲ" ಎಂದು ನ್ಯಾಯಾಧೀಶ ವಿ ಎಂ ಕಾನಡೆ ಮತ್ತು ಬಿಪಿ ಕೋಲಾಬವಲ್ಲಾ ತಿಳಿಸಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆ (ಎಫ್ ಎಸ್ ಎಸ್ ಎ ಐ) ಮ್ಯಾಗಿ ನಿಷೇಧವನ್ನು ಸಮರ್ಥಿಸಿವಾಗ ಕೋರ್ಟ್ ಹೀಗೆ ಅಭಿಪ್ರಾಯಪಟ್ಟಿದೆ.
ಕೋರ್ಟ್ ಅಭಿಪ್ರಾಯವನ್ನು ಒಪ್ಪಿಕೊಂಡ ನೆಸ್ಲೆ ವಕೀಲ, ಯಾವ ಮದ್ಯ ಉತ್ಪನ್ನವು ಈ ಆಹಾರ ನಿಯಂತ್ರಣ ಮಂಡಲಿಯ ಒಪ್ಪಿಗೆ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಎಫ್ ಎಸ್ ಎಸ್ ಎ ಐ ವಕೀಲ ಅನಿಲ್ ಸಿಂಗ್ ಅವರ ಸಮರ್ಥನೆಗೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, ಸೆಕ್ಷನ್ ೨೨ ನ್ನು ಮರುಪರೀಕ್ಷೆಗೆ ಒಳಪಡಿಸುವ ಅಗತ್ಯ ಇದೆ ಎಂದಿದ್ದಾರೆ. ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ನ್ಯಾಯಬದ್ಧವಾದುದೆ ಅಲ್ಲವೇ ಎಂದು ವಿಭಾಗೀಯ ಪೀಠ ಪರಿಶೀಲಿಸಲಿದೆ ಎಂದು ಕೋರ್ಟ್ ತಿಳಿಸಿದೆ.
ಎಂ ಎಸ್ ಜಿ ಸೇರಿಸಿಲ್ಲ ಎಂದು ತಪ್ಪು ಸಂದೇಶವನ್ನು ನೆಸ್ಲೆ ಮ್ಯಾಗಿ ಪೊಟ್ಟಣಗಳ ಮೇಲೆ ಹಾಕುತ್ತಿತ್ತು ಎಂದು ಎಫ್ ಎಸ್ ಎಸ್ ಎ ಐ ವಕೀಲ ಅನಿಲ್ ಸಿಂಗ್ ವಾದಿಸಿದರೆ, ನೆಸ್ಲೆ ವಕೀಲ ಈ ಆಹಾರವನ್ನು ಪರೀಕ್ಷಿಸಿರುವ ಸಂಸ್ಥೆಗಳ ಮಾನ್ಯತೆಯನ್ನೇ ಪ್ರಶ್ನಿಸಿದ್ದಾರೆ.