ನವದೆಹಲಿ: ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಉಗ್ರ ಸಂಘಟನೆಯನ್ನು ಬೆಂಬಲಿಸುವ 30 ಯುವಕರ ಮೇಲೆ ಭಾರತೀಯ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿರುವ ಯುವಕರಿಂದ ನಡೆಸುತ್ತಿರುವ ಜಿಹಾದ್ ಪ್ರಚಾರ, ಆನ್ ಲೈನ್ ಬೋಧನೆ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಿದೆ.
ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, 30 ಯುವಕರ ಪೈಕಿ ಕೆಲ ಯುವಕರು ಸಿರಿಯಾಗೆ ತೆರಳಲು ಯೋಜನೆ ರೂಪಿಸಿದ್ದು ಇದಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಜಿಹಾದ್ ಗಾಗಿ ಆನ್ ಲೈನ್ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇದನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ.
ಭಾರತದ ಯುವಕರನ್ನು ಉಗ್ರ ಚಟುವಟಿಕೆಗಳಿಗಾಗಿ ನೇಮಕ ಮಾಡುಕೊಂಡು ರಾಷ್ಟ್ರದ ಭದ್ರತೆಗೆ ಸವಾಲೆಸೆಯುತ್ತಿದ್ದ ಇಸ್ಲಾಮಿಕ್ ಉಗ್ರ ಸಂಘಟನೆ ಹಾಗೂ ಅದರ ಸಹ ಸಂಘಟನೆಗಳನ್ನು ಭಾರತ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೂ ಇಸ್ಲಾಮಿಕ್ ಉಗ್ರ ಸಂಘಟನೆಯಿಂದ ಭಾರತಕ್ಕೆ ವಾಪಸ್ಸಾದ ಯುವಕರು ವಿಧ್ವಂಸಕ ಕೃತ್ಯ ನಡೆಸುವ ಭೀತಿ ಎದುರಾಗಿತ್ತು.
ಈ ವರೆಗೂ 11 ಜನ ಯುವಕರು ಸಿರಿಯಾದಲ್ಲಿ ಐಎಸ್ ಗೆ ಸೇರ್ಪಡೆಯಾಗಿದ್ದಾರೆ ಇರಾಕ್ ನಲ್ಲಿ 5 ಭಾರತೀಯರು ಸೇರ್ಪಡೆಯಾಗಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸುವ ವರದಿ ಪ್ರಕಾರ, 80 ರಾಷ್ಟ್ರಗಳಿಂದ ಒಟ್ಟಾರೆ 15 ,000 ಉಗ್ರರು ಈವರೆಗೂ ಇಸ್ಲಾಮಿಕ್ ಸ್ಟೇಟ್ ಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.